ಚಂದ್ರವಳ್ಳಿ ನ್ಯೂಸ್, ಮಂಗಳೂರು:
ಕಡಲನಗರಿ ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯುತ್ತಿರುವ ಬೆನ್ನಲ್ಲೇ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಾಗೂ ಸರ್ಕಾರದ ಧೋರಣೆಗಳನ್ನು ಖಂಡಿಸಿ ನಡೆದ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿವೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಲು ಯತ್ನಿಸಿದ ಎಸ್‌ಡಿಪಿಐ ಹಾಗೂ ಸಚಿವ ಸಂಪುಟ ಸಭೆಗೆ ಮುತ್ತಿಗೆ ಹಾಕಲು ಹೊರಟಿದ್ದ ಸಿಪಿಐ(ಎಂ) ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಸ್‌ಡಿಪಿಐ ವತಿಯಿಂದ ಕಪ್ಪು ಬಾವುಟ ಪ್ರದರ್ಶನ ಯತ್ನ:
ಬಂಟ್ವಾಳ ತಾಲೂಕಿನ ರಹ್ಮಾನ್ ಕೊಳತ್ತಮಜಲು ಅವರ ಕೊಲೆ ಪ್ರಕರಣದ ಆರೋಪಿಗಳಿಗೆ ಜಾಮೀನು ಸಿಗಲು ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ ಎಂದು ಆರೋಪಿಸಿ, ನಗರದ ಸ್ಟೇಟ್ ಬ್ಯಾಂಕ್ ಬಳಿಯ ರಾವ್ & ರಾವ್ ವೃತ್ತದಲ್ಲಿ ಎಸ್‌ಡಿಪಿಐ ಮುಖಂಡರು ಮತ್ತು ಕಾರ್ಯಕರ್ತರು ದಿಢೀರ್ ಕಪ್ಪು ಬಾವುಟ ಪ್ರದರ್ಶನ ಪ್ರತಿಭಟನೆ ನಡೆಸಿದರು.
ಮುಖ್ಯಮಂತ್ರಿಗಳ ಬೆಂಗಾವಲು ವಾಹನ ಸಾಗುವ ಮಾರ್ಗದಲ್ಲಿ ಏಕಾಏಕಿ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಭದ್ರತೆಯ ದೃಷ್ಟಿಯಿಂದ ಎಚ್ಚೆತ್ತ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಎಸ್‌ಡಿಪಿಐ ಮುಖಂಡರಾದ ಅನ್ವರ್ ಸಾದತ್, ರಿಯಾಜ್ ಕಡಂಬು, ಮುನೀಶ್ ಅಲಿ ಸೇರಿದಂತೆ ಪ್ರಮುಖರನ್ನು ವಶಕ್ಕೆ ಪಡೆದು ಪೊಲೀಸ್ ಬಸ್‌ನಲ್ಲಿ ಕರೆದೊಯ್ದರು. ಈ ವೇಳೆ ಬಸ್‌ನ ಕಿಟಕಿಗಳ ಮೂಲಕ ಕೈಬೀಸಿ ಮುಖಂಡರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಎಸ್‌ಡಿಪಿಐ ಮುಖಂಡ ಶಾಕೀರ್ ಈ ಸಂದರ್ಭದಲ್ಲಿ ಆರೋಪಿಸಿದರು.
ಸಂಪುಟ ಸಭೆಗೆ ಮುತ್ತಿಗೆ ಯತ್ನ: ಸಿಪಿಐ(ಎಂ) ನಾಯಕರ ಬಂಧನ
ಮತ್ತೊಂದೆಡೆ, ಕರಾವಳಿ ಕರ್ನಾಟಕದ ಅಭಿವೃದ್ಧಿ ನೀತಿಯನ್ನು ಕಾರ್ಪೊರೇಟ್ ಪರವಾಗಿಸದೆ ಜನಪರವಾಗಿ ರೂಪಿಸಬೇಕು ಹಾಗೂ ಪಿಪಿಪಿ ನೀತಿಯನ್ನು ಕೈಬಿಡಬೇಕೆಂದು ಆಗ್ರಹಿಸಿ ಸಿಪಿಐ(ಎಂ) ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಾಗಿತ್ತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಮಿತಿಗಳ ಜಂಟಿ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಶಿಕ್ಷಣ, ಉದ್ಯೋಗ, ಆರೋಗ್ಯ ಹಾಗೂ ವಸತಿ ಒದಗಿಸುವಂತೆ ಒಟ್ಟು 21 ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿತ್ತು.
ಬೆಂದೂರ್‌ವೆಲ್ ವೃತ್ತದ ಬಳಿ ಆರಂಭವಾದ ಮೆರವಣಿಗೆಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು. ಧರಣಿ ಸಭೆಯಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ. ಕೆ. ಪ್ರಕಾಶ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಹಾಗೂ ಉಡುಪಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲೆಗಾರ್ ಮಾತನಾಡಿ, ಬಂಡವಾಳಶಾಹಿಗಳ ಹಿತಾಸಕ್ತಿ ಕಾಯುವ ಯೋಜನೆಗಳಿಗೆ ಸರ್ಕಾರ ಮಣೆ ಹಾಕಬಾರದೆಂದು ಎಚ್ಚರಿಸಿದರು.
ಪ್ರಜಾಸೌಧದತ್ತ ತೆರಳಿ ಸಚಿವರಿಗೆ ಮನವಿ ಸಲ್ಲಿಸಲು ಮುಂದಾದ ನಾಯಕರು ಹಾಗೂ ನೂರಾರು ಕಾರ್ಯಕರ್ತರನ್ನು ಪೊಲೀಸರು ಸ್ಥಳದಲ್ಲೇ ವಶಕ್ಕೆ ಪಡೆದರು. ಪೊಲೀಸ್ ವಾಹನಗಳ ಒಳಗೂ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ 'ಪ್ರಜಾಸೌಧ'ದಲ್ಲಿ: ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯುತ್ತಿರುವ ಈ ಸಚಿವ ಸಂಪುಟ ಸಭೆಯು ಕರಾವಳಿಯ ಅಭಿವೃದ್ಧಿ ನಿರೀಕ್ಷೆಗಳ ಜೊತೆಗೆ ರಾಜಕೀಯ ಹಾಗೂ ಪ್ರತಿಭಟನಾ ಗದ್ದಲದಿಂದಾಗಿ ಸದ್ದು ಮಾಡುತ್ತಿದೆ.




