ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಹಠಾತ್ ದಾಳಿ ನಡೆಸಿದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು, ಜೈಲಿನೊಳಗೆ ನಿಷೇಧಿತ ವಸ್ತುಗಳನ್ನು ಇಟ್ಟುಕೊಂಡಿದ್ದ ಆರೋಪದ ಮೇಲೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮತ್ತೊಬ್ಬ ವಿಚಾರಣಾಧೀನ ಕೈದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿಸಿಬಿಯ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋದ ಇನ್ಸ್‌ಪೆಕ್ಟರ್ ಎಂ.ಎಲ್. ಸುಬ್ರಹ್ಮಣ್ಯ ಸ್ವಾಮಿ ಅವರ ನೇತೃತ್ವದ ತಂಡ ಹೈ-ಸೆಕ್ಯುರಿಟಿ ಬ್ಯಾರಕ್‌ನಲ್ಲಿ ತನಿಖೆ ನಡೆಸಿದಾಗ ಈ ಸ್ಫೋಟಕ ಸತ್ಯ ಹೊರಬಿದ್ದಿದೆ.
ಶೋಧದ ವೇಳೆ ಪತ್ತೆಯಾದ ವಸ್ತುಗಳು:
ಭದ್ರತಾ ವಿಭಾಗ 3ರ ಮೊದಲ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 4ರಲ್ಲಿ ಪೊಲೀಸರು ಸುದೀರ್ಘ ಪರಿಶೀಲನೆ ನಡೆಸಿದಾಗ, ತಿಳಿ-ನೀಲಿ ಬಣ್ಣದ ರೆಡ್‌ಮಿ 5G ಮೊಬೈಲ್ ಫೋನ್, ಬಿಳಿ ಚಾರ್ಜರ್, ನೀಲಿ ಬಣ್ಣದ ಪಾಕೆಟ್ ನೋಟ್‌ಬುಕ್ ಹಾಗೂ ಕಪ್ಪು ಬಣ್ಣದ ಸ್ಯಾನ್‌ಡಿಸ್ಕ್ ಪೆನ್‌ಡ್ರೈವ್ ಸಿಕ್ಕಿಬಿದ್ದಿವೆ.
ಪ್ರಜ್ವಲ್ ರೇವಣ್ಣ ಒಪ್ಪಿಗೆ: ವಿಚಾರಣೆ ವೇಳೆ ಪ್ರಕಟಿತ ನೋಟ್‌ಬುಕ್ ತನಗೆ ಸೇರಿದ್ದು ಎಂದು ಪ್ರಜ್ವಲ್ ಒಪ್ಪಿಕೊಂಡಿದ್ದಾರೆ. ಅಲ್ಲದೆ, ವಕೀಲರು ಮತ್ತು ಸಂಬಂಧಿಕರನ್ನು ಸಂಪರ್ಕಿಸಲು ಸಹಕೈದಿ ಪ್ರತಾಪ್ ರೈ ಬಳಿಯಿದ್ದ ಫೋನ್ ಅನ್ನು ತಾನೂ ಬಳಸುತ್ತಿದ್ದುದಾಗಿ ಸಿಸಿಬಿ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾರೆ.
ಪ್ರತಾಪ್ ರೈ ಹೇಳಿಕೆ: ಮೊಬೈಲ್ ಫೋನ್, ಚಾರ್ಜರ್ ಮತ್ತು ಪೆನ್‌ಡ್ರೈವ್ ತನಗೆ ಸೇರಿದ್ದು ಎಂದು ತಿಳಿಸಿರುವ ಮತ್ತೊಬ್ಬ ಕೈದಿ ಪ್ರತಾಪ್ ರೈ, ಸಂಬಂಧಿಕರು ಹಾಗೂ ವಕೀಲರೊಂದಿಗೆ ಮಾತನಾಡಲು ಇದನ್ನು ಬಳಸುತ್ತಿರುವುದಾಗಿ ತಿಳಿಸಿದ್ದಾನೆ.
ಅಪರಿಚಿತ ವ್ಯಕ್ತಿಯಿಂದ ಬಂದಿತೇ ಮೊಬೈಲ್?
ಜೈಲಿನ ನಿಯಮಾವಳಿಗಳನ್ನು ಗಾಳಿಗೆ ತೂರಿ, ಯಾರೋ ಅಪರಿಚಿತ ವ್ಯಕ್ತಿಯ ನೆರವಿನಿಂದ ಈ ನಿಷೇಧಿತ ವಸ್ತುಗಳನ್ನು ಜೈಲಿನೊಳಗೆ ತರಿಸಿಕೊಂಡು ಕಾನೂನುಬಾಹಿರವಾಗಿ ಬಳಸಲಾಗಿದೆ ಎಂದು ಸಿಸಿಬಿ ತನ್ನ ದೂರಿನಲ್ಲಿ ಆರೋಪಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಬುಧವಾರ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಕಾರಾಗೃಹ (ತಿದ್ದುಪಡಿ) ಕಾಯ್ದೆ 2022ರ ಸೆಕ್ಷನ್ 42 ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಾಯ್ದೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.




