ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿರುವ ಕಾಂಗ್ರೆಸ್ ಮತ್ತು 'ಇಂಡಿಯಾ' ಒಕ್ಕೂಟದ ಪಕ್ಷಗಳು, ಸೋಮವಾರ ದೆಹಲಿಯಲ್ಲಿ ಸುಪ್ರೀಂ ಕೋರ್ಟ್‌ವರೆಗೆ ಬೃಹತ್ ಮೆರವಣಿಗೆ ನಡೆಸುತ್ತಿವೆ. ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡುವುದರ ಜೊತೆಗೆ ಮುಖ್ಯ ಚುನಾವಣಾ ಆಯುಕ್ತರಿಗೆ ನೇರ ಸಂದೇಶ ರವಸಿದ್ದಾರೆ.
ಸರ್ಕಾರದ ಅಧಿಕಾರಿಗಳೇ ನಮ್ಮ ಸಂಪರ್ಕದಲ್ಲಿದ್ದಾರೆ:
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಸರ್ಕಾರದ ಸುಮಾರು 200 ಅಧಿಕಾರಿಗಳು ತಮ್ಮ ಸಂಪರ್ಕದಲ್ಲಿದ್ದು, ಆಂತರಿಕ ಮಾಹಿತಿ ನೀಡುತ್ತಿದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸಿಇಸಿ ಜ್ಞಾನೇಶ್ ಕುಮಾರ್‌ಗೆ ರಾಜೀನಾಮೆ ಎಚ್ಚರಿಕೆ:
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮನ್ನು ಸಂಪರ್ಕಿಸಿದ್ದರೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ತಮಗೆ ಸಂದೇಶಗಳು ಬಂದಿರುವುದಾಗಿ ತಿಳಿಸಿದರು. ಸಿಇಸಿ ಅವರು ತಮ್ಮ ಹುದ್ದೆಗೆ ಅಂಟಿಕೊಳ್ಳದೆ, 'ಸಾಕ್ಷಿದಾರರಾಗಿ' (ಸರ್ಕಾರಿ ಸಾಕ್ಷಿಯಾಗಿ) ಬದಲಾಗಿ ಕೂಡಲೇ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.
"ಹೌದು, ನನಗೆ ಸಂದೇಶಗಳು ಬರುತ್ತವೆ. ಅವರಿಗೆ ನನ್ನ ಪ್ರತಿಕ್ರಿಯೆ ಏನೆಂದರೆ, 'ಸಾಕ್ಷಿದಾರರಾಗಿ ಬದಲಾಗಿ'. ರಾಜೀನಾಮೆ ನೀಡಿ, ದಾರಿಯಿಂದ ಪಕ್ಕಕ್ಕೆ ಸರಿಯಿರಿ. ಅದು ದೇಶಕ್ಕೆ ನೀವು ಸಲ್ಲಿಸುವ ದೊಡ್ಡ ಸೇವೆಯಾಗುತ್ತದೆ. ನಿಮ್ಮ ಮೇಲಿರುವ ಒತ್ತಡದ ಸ್ವರೂಪ ನಮಗೆ ಚೆನ್ನಾಗಿ ಅರ್ಥವಾಗುತ್ತದೆ" ಎಂದು ರಾಹುಲ್ ಹೇಳಿದರು.
ಪೊಲೀಸರು ಮತ್ತು ಅರೆಸೇನಾಪಡೆಗಳ ಬೆಂಬಲವಿದೆ:
ಸುಪ್ರೀಂ ಕೋರ್ಟ್ ಮೆರವಣಿಗೆಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಮಾತನಾಡುತ್ತಾ, "ನಮ್ಮ ಯುವಕರನ್ನು ಯಾಕೆ ಹೊಡೆಯುವಂತೆ ಹೇಳಲಾಗುತ್ತಿದೆ ಎಂದು ಕೆಲವು ಪೊಲೀಸ್ ಸಿಬ್ಬಂದಿ ನಮ್ಮ ಬಳಿ ಪ್ರಶ್ನಿಸುತ್ತಿದ್ದರು. ಕೇಂದ್ರ ಗೃಹ ಸಚಿವಾಲಯ ಮತ್ತು ವಿವಿಧ ಅರೆಸೇನಾ ಪಡೆಗಳ ಒಳಗಡೆಯೇ ಈ ಅಸಮಾಧಾನ ಮೂಡಿದೆ. ಶೇಕಡಾ 50 ರಷ್ಟು ಪೊಲೀಸ್ ಸಿಬ್ಬಂದಿ, 'ನೀವು ಮಾಡುತ್ತಿರುವುದು ಸರಿ, ಅದನ್ನು ಮುಂದುವರಿಸಿ' ಎಂದು ನಮಗೆ ಬೆಂಬಲ ಸೂಚಿಸುತ್ತಿದ್ದಾರೆ" ಎಂದು ಅವರು ನುಡಿದರು.
ದೆಹಲಿಯಲ್ಲಿ ಜೈಲಿನ ವಾತಾವರಣ: ರಾಹುಲ್ ಆಕ್ರೋಶ:
'ಇಂಡಿಯಾ' ಮೈತ್ರಿಕೂಟದ ಸುಪ್ರೀಂ ಕೋರ್ಟ್ ಮೆರವಣಿಗೆಯ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ವಿಧಿಸಲಾದ ಬಿಗಿ ಭದ್ರತಾ ನಿರ್ಬಂಧಗಳನ್ನು ರಾಹುಲ್ ಗಾಂಧಿ ತೀವ್ರವಾಗಿ ಖಂಡಿಸಿದರು. ಸಾಮಾನ್ಯ ಜನರ ಓಡಾಟವನ್ನು ಯಾಕೆ ನಿರ್ಬಂಧಿಸಲಾಗುತ್ತಿದೆ ಎಂದು ಪ್ರಶ್ನಿಸಿದ ಅವರು, "ಇಂದು ದೆಹಲಿಯನ್ನು ಯಾಕೆ ಜೈಲಿನಂತೆ ಮಾಡಲಾಗಿದೆ? ದೆಹಲಿ ಇಂದು ಸಂಪೂರ್ಣವಾಗಿ ಒಂದು ಕೋಟೆಯಂತಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.



