ಚಂದ್ರವಳ್ಳಿ ನ್ಯೂಸ್, ನವದೆಹಲಿ/ಬೆಂಗಳೂರು:
ಹವಾಮಾನ ವೈಪರೀತ್ಯ ಹಾಗೂ ನಿರಂತರ ಬೆಲೆ ಕುಸಿತದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ರಾಜ್ಯದ ಮಾವು ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದೆ ಎಂದು ಸಚಿವ ಕುಮಾರಸ್ವಾಮಿ ತಿಳಿಸಿದ್ದಾರೆ.
ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಮನವಿಗೆ ತಕ್ಷಣ ಸ್ಪಂದಿಸಿರುವ ಕೇಂದ್ರ ಕೃಷಿ ಇಲಾಖೆಯು, ರಾಜ್ಯದ ಮಾವು ಬೆಳೆಗಾರರಿಗೆ ದೊಡ್ಡ ಮಟ್ಟದ ಆರ್ಥಿಕ ನೆರವು ಘೋಷಿಸಿದೆ.
ಕೇಂದ್ರ ಸರ್ಕಾರದ ಈ ಸಕಾಲಿಕ ಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ರೈತರ ಪರವಾಗಿ ಅನಂತ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಮಾರುಕಟ್ಟೆ ಹಸ್ತಕ್ಷೇಪ ಯೋಜನೆ ಅಡಿ ಭರ್ಜರಿ ನೆರವು
ರಾಜ್ಯದ ತೋತಾಪುರಿ ಮಾವು ಬೆಳೆಗಾರರ ಹಿತರಕ್ಷಣೆಗಾಗಿ ಕೇಂದ್ರ ಸರ್ಕಾರವು ವಿಶೇಷ ಆದೇಶ ಹೊರಡಿಸಿದೆ. ಇದರ ಮುಖ್ಯಾಂಶಗಳು ಹೀಗಿವೆ.
ಆರ್ಥಿಕ ನೆರವು: ಮಾರುಕಟ್ಟೆ ಹಸ್ತಕ್ಷೇಪ ಯೋಜನೆ ಅಡಿಯಲ್ಲಿ ಪ್ರತಿ ಕ್ವಿಂಟಲ್‌ಗೆ 1,750 ಆರ್ಥಿಕ ನೆರವು ನೀಡಲು ಆದೇಶಿಸಲಾಗಿದೆ.
ರಾಜ್ಯದ ಒಟ್ಟು 1,30,000 ಮೆಟ್ರಿಕ್ ಟನ್ ಪ್ರಮಾಣದ ತೋತಾಪುರಿ ಮಾವಿಗೆ ಈ ಆರ್ಥಿಕ ನೆರವು ಅನ್ವಯವಾಗಲಿದೆ.
ಹೆಚ್.ಡಿ.ಕೆ ಮನವಿಗೆ ತಕ್ಷಣ ಸ್ಪಂದಿಸಿದ ಕೇಂದ್ರ ಸಚಿವರು
ರಾಜ್ಯದಲ್ಲಿ ಮಾವು ಬೆಳೆಗಾರರು ಎದುರಿಸುತ್ತಿದ್ದ ಸಂಕಷ್ಟದ ಕುರಿತು ಹೆಚ್.ಡಿ. ಕುಮಾರಸ್ವಾಮಿ ಅವರು ಜೂನ್ 17, 2026ರಂದು ಕೇಂದ್ರ ಕೃಷಿ ಸಚಿವರಿಗೆ ಸುದೀರ್ಘ ಪತ್ರ ಬರೆದು ಮನವಿ ಮಾಡಿದ್ದರು. ತದನಂತರ, ಬುಧವಾರ ಸಂಜೆ ನವದೆಹಲಿಯಲ್ಲಿರುವ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ನಿವಾಸಕ್ಕೆ ಖುದ್ದಾಗಿ ಭೇಟಿ ನೀಡಿ, ರಾಜ್ಯದಲ್ಲಿನ ರೈತರ ಸ್ಥಿತಿಗತಿಗಳು ಹಾಗೂ ಬೆಲೆ ಕುಸಿತದ ಬಗ್ಗೆ ಸವಿವರವಾಗಿ ಮನವರಿಕೆ ಮಾಡಿಕೊಟ್ಟಿದ್ದರು.
ಕುಮಾರಸ್ವಾಮಿ ಅವರ ವಿನಂತಿಯನ್ನು ಮನ್ನಿಸಿದ ಕೃಷಿ ಸಚಿವರು, ತಕ್ಷಣವೇ ಆರ್ಥಿಕ ನೆರವು ಘೋಷಿಸುವುದಾಗಿ ಭರವಸೆ ನೀಡಿದ್ದರು. ಅದರ ಬೆನ್ನಲ್ಲೇ ಈ ಮಹತ್ವದ ಆದೇಶ ಹೊರಬಿದ್ದಿದೆ.
"ಮಾವು ಬೆಳೆಗಾರರಿಗೆ ಈ ನೆರವು ಅತಿದೊಡ್ಡ ಉಪಶಮನವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ ಅನ್ನದಾತರನ್ನು ಬೆಲೆ ಕುಸಿತ ಹಾಗೂ ಹವಾಮಾನ ವೈಪರೀತ್ಯದಂತಹ ಸಂಕಷ್ಟಗಳಿಂದ ಪಾರು ಮಾಡಲು ಕೇಂದ್ರ ಸರ್ಕಾರ ಅವಿರತವಾಗಿ ಶ್ರಮಿಸುತ್ತಿದೆ ಎಂಬುದಕ್ಕೆ ಈ ಕ್ರಮವೇ ಸಾಕ್ಷಿ."
ಹೆಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವರು.



