ಚಂದ್ರವಳ್ಳಿ ನ್ಯೂಸ್, ನವದೆಹಲಿ:
ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯನ್ನು ಸಮತೋಲನದಲ್ಲಿಡುವ ಹಾಗೂ ಕಾಳಸಂತೆಯನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಭಾರಿ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಇನ್ನು ಮುಂದೆ ಕೈಗಾರಿಕಾ, ವಾಣಿಜ್ಯ ಹಾಗೂ ಸಾಂಸ್ಥಿಕ ಬಳಕೆದಾರರು ಸಾಮಾನ್ಯ ಪೆಟ್ರೋಲ್ ಬಂಕ್‌ಗಳಿಂದ ದೊಡ್ಡ ಪ್ರಮಾಣದಲ್ಲಿ (ಬಲ್ಕ್) ಇಂಧನ ಖರೀದಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಜೂನ್11ರಂದು ‘ಮೋಟಾರ್ ಸ್ಪಿರಿಟ್ ಮತ್ತು ಹೈ ಸ್ಪೀಡ್ ಡೀಸೆಲ್ (ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ಪೂರೈಕೆಯ ತಾತ್ಕಾಲಿಕ ನಿಯಂತ್ರಣ) ಆದೇಶ 2026’ ಅಧಿಸೂಚನೆಯನ್ನು ಹೊರಡಿಸಿದ್ದು, ತೈಲ ಕಂಪನಿಗಳಿಗೆ ಈ ನಿರ್ಬಂಧ ಹೇರಲು ಸಂಪೂರ್ಣ ಅಧಿಕಾರ ನೀಡಿದೆ.
ಇದ್ದಕ್ಕಿದ್ದಂತೆ ಇಂತಹ ನಿರ್ಧಾರವೇಕೆ?:
ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನತೆಯಿಂದಾಗಿ ಜಾಗತಿಕ ತೈಲ ಸರಬರಾಜು ಸರಪಳಿಯಲ್ಲಿ ವ್ಯತ್ಯಯ ಉಂಟಾಗಿದೆ. ಸಾಮಾನ್ಯ ಗ್ರಾಹಕರಿಗೆ ಹೊರೆ ಕಡಿಮೆ ಮಾಡಲು ಸರ್ಕಾರಿ ತೈಲ ಕಂಪನಿಗಳು ಚಿಲ್ಲರೆ ದರಗಳನ್ನು ನಿಯಂತ್ರಣದಲ್ಲಿಟ್ಟಿವೆ. ಆದರೆ, ಕೈಗಾರಿಕೆಗಳು ಮತ್ತು ವಾಣಿಜ್ಯ ಬಳಕೆದಾರರಿಗೆ ಮಾರುಕಟ್ಟೆ ಆಧಾರಿತ 'ಬಲ್ಕ್ ದರ' ನಿಗದಿಪಡಿಸಲಾಗಿದೆ.
ದರಗಳ ನಡುವಿನ ಭಾರಿ ವ್ಯತ್ಯಾಸ:
ಪ್ರಸ್ತುತ ದೆಹಲಿಯಲ್ಲಿ ಚಿಲ್ಲರೆ ಡೀಸೆಲ್ ದರ ಪ್ರತಿ ಲೀಟರ್‌ಗೆ 95.20 ಇದ್ದರೆ, ಬಲ್ಕ್ ಡೀಸೆಲ್ ದರ ಬರೋಬ್ಬರಿ 134.50 ಆಗಿದೆ. ಈ ಭಾರಿ ದರ ವ್ಯತ್ಯಾಸದಿಂದಾಗಿ ಲಾಭ ಮಾಡಿಕೊಳ್ಳಲು ಮುಂದಾಗಿದ್ದ ಹಲವಾರು ಕೈಗಾರಿಕೆಗಳು ಹಾಗೂ ವಾಣಿಜ್ಯ ಬಳಕೆದಾರರು, ಬಲ್ಕ್ ಕೇಂದ್ರಗಳನ್ನು ಬಿಟ್ಟು ಸಾಮಾನ್ಯ ಪೆಟ್ರೋಲ್ ಬಂಕ್‌ಗಳಿಂದಲೇ ದೊಡ್ಡ ಪ್ರಮಾಣದಲ್ಲಿ ಇಂಧನ ಖರೀದಿಸಲು ಆರಂಭಿಸಿದ್ದರು. ಇದನ್ನು ತಡೆಯಲು ಕೇಂದ್ರ ಸರ್ಕಾರ ಈಗ ಹೊಸ ನಿಯಮ ತಂದಿದೆ.
ಹೊಸ ಇಂಧನ ನಿಯಮಗಳಲ್ಲೇನಿದೆ?:
ಖರೀದಿಗೆ ಮಿತಿ: ಡೀಸೆಲ್ ಖರೀದಿಗೆ ಪ್ರತಿ ವಾಹನ ಅಥವಾ ಗ್ರಾಹಕರಿಗೆ ದಿನಕ್ಕೆ ಗರಿಷ್ಠ 200 ಲೀಟರ್ ಮಿತಿ ವಿಧಿಸಲಾಗಿದೆ.
ಬಲ್ಕ್ ಖರೀದಿಗೆ ನಿಷೇಧ: ಕೈಗಾರಿಕಾ ಮತ್ತು ವಾಣಿಜ್ಯ ಬಳಕೆದಾರರು ಸಾಮಾನ್ಯ ಪೆಟ್ರೋಲ್ ಬಂಕ್‌ಗಳ ಬದಲಿಗೆ ತಮ್ಮದೇ ಗ್ರಾಹಕ ಪಂಪ್‌ಗಳು ಅಥವಾ ಅಧಿಕೃತ ಬಲ್ಕ್ ಸರಬರಾಜು ಕೇಂದ್ರಗಳಿಂದಲೇ ಇಂಧನ ಪಡೆಯಬೇಕು.
ನಿಯಮಬದ್ಧ ಖರೀದಿ: ವಾಹನದ ಟ್ಯಾಂಕ್ ಅಥವಾ PESO (Petroleum and Explosives Safety Organisation) ಅನುಮೋದಿತ ಕಂಟೇನರ್‌ಗಳ ಮೂಲಕ ಮಾತ್ರ ಡೀಸೆಲ್ ಖರೀದಿಸಲು ಅವಕಾಶವಿರುತ್ತದೆ.
ಮರು ಮಾರಾಟಕ್ಕಿಲ್ಲ ಅವಕಾಶ: ಚಿಲ್ಲರೆ ಬಂಕ್‌ಗಳಿಂದ ಖರೀದಿಸಿದ ಇಂಧನವನ್ನು ಯಾವುದೇ ಕಾರಣಕ್ಕೂ ಮರು ಮಾರಾಟ ಮಾಡುವಂತಿಲ್ಲ.
90 ದಿನಗಳ ಕಾಲ ಜಾರಿ: ಈ ಹೊಸ ನಿಯಮಗಳು ಆರಂಭಿಕವಾಗಿ 90 ದಿನಗಳವರೆಗೆ ಜಾರಿಯಲ್ಲಿರಲಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯವಿದ್ದರೆ ಹೊಸ ಅಧಿಸೂಚನೆಯ ಮೂಲಕ ಅವಧಿಯನ್ನು ವಿಸ್ತರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ರಾಜ್ಯಗಳಿಗೆ ಕಟ್ಟುನಿಟ್ಟಿನ ಸೂಚನೆ:
ಇಂಧನ ಸಂಗ್ರಹಣೆ (ಹೋರ್ಡಿಂಗ್), ಕಾಳಸಂತೆ, ಅನಧಿಕೃತ ಖರೀದಿ ಹಾಗೂ ಇಂಧನ ದುರುಪಯೋಗವನ್ನು ತಡೆಯಲು ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಈ ಮುಂಜಾಗ್ರತಾ ಕ್ರಮಗಳಿಂದಾಗಿ ಸಾಮಾನ್ಯ ಗ್ರಾಹಕರಿಗೆ ಇಂಧನ ಕೊರತೆಯಾಗದಂತೆ ತಡೆಯಬಹುದು ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.



