ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯಕ್ಕೆ ಬರಬೇಕಾದ ಅನುದಾನ ಮತ್ತು ಪರಿಹಾರದ ವಿಚಾರವಾಗಿ ವಿಧಾನ ಪರಿಷತ್‌ನಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಬರಗಾಲದ ನೆರವು ಮತ್ತು ಕೇಂದ್ರ ಸರ್ಕಾರದ ಅನುದಾನ ಹಂಚಿಕೆ ಕುರಿತಂತೆ ಸದನದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಗಳು ಕೇಳಿಬಂದವು.
ಸಚಿವರ ಆಕ್ರೋಶ: ರಾಜ್ಯದ ಹಕ್ಕುಗಳ ಪರ ಧ್ವನಿ ಎತ್ತಬೇಕಾದ ಬಿಜೆಪಿ ಸಂಸದರಿಗೆ ಕೇಂದ್ರದ ಮುಂದೆ ಮಾತನಾಡುವ ಧಮ್ ಇಲ್ಲ ಎಂದು ಪೌರಾಡಳಿತ ಸಚಿವ ಹೆಚ್.ಸಿ. ಬಾಲಕೃಷ್ಣ ತೀವ್ರವಾಗಿ ಕಿಡಿಕಾರಿದರು.
ವಿಪಕ್ಷಗಳ ತಿರುಗೇಟು: ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಖಜಾನೆ ಬರಿದಾಗಿದ್ದು, ರಾಜ್ಯದ ಸಾಲದ ಮಿತಿ ತಲುಪಿದೆ. ಜತೆಗೆ ಅನುದಾನ ತರಲು ಸರ್ಕಾರ ಸರ್ವಪಕ್ಷ ನಿಯೋಗ ಕೊಂಡೊಯ್ಯುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ಸದಸ್ಯ ಎಸ್. ಅರುಣ್ ವಾಗ್ದಾಳಿ ನಡೆಸಿದರು.
ಸುಪ್ರೀಂ ಕೋರ್ಟ್ ಮೊರೆ: ಕೇಂದ್ರದಿಂದ ಬರ ಪರಿಹಾರ ಸುಲಭವಾಗಿ ಸಿಗದೆ ಇದ್ದಾಗ, ರಾಜ್ಯ ಸರ್ಕಾರವು ಕಾನೂನು ಹೋರಾಟದ ಮೂಲಕ ಸುಪ್ರೀಂ ಕೋರ್ಟ್ ಮೊರೆ ಹೋಗಿ ಹಕ್ಕನ್ನು ಪಡೆದುಕೊಳ್ಳಬೇಕಾಯಿತು ಎಂದು ಸಚಿವರು ಸಮರ್ಥಿಸಿಕೊಂಡರು.
ವಿಧಾನ ಪರಿಷತ್‌ನಲ್ಲಿ ನಡೆದ ಬರ ಕುರಿತ ವಿಶೇಷ ಚರ್ಚೆಯ ವೇಳೆ ಬಿಜೆಪಿ ಸದಸ್ಯ ಎಸ್. ಅರುಣ್ ಮಾತನಾಡಿ, "ರಾಜ್ಯದಲ್ಲಿ ತಲೆದೂರಿರುವ ಬರಗಾಲಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ಎನ್‌ಡಿಆರ್‌ಎಫ್ ನಿಧಿ ದೊರೆಯುತ್ತದೆ. ಆದರೆ ರಾಜ್ಯ ಸರ್ಕಾರ ಸದಾ ಕೇಂದ್ರದೊಂದಿಗೆ ಜಟಾಪಟಿ ನಡೆಸುತ್ತಿರುವುದರಿಂದ ಅನುದಾನ ವಿಳಂಬವಾಗಿದೆ. ಎಲ್ಲರ ವಿಶ್ವಾಸ ಗಳಿಸಿ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕೊಂಡೊಯ್ದಿದ್ದರೆ ಸುಲಭವಾಗಿ ಅನುದಾನ ಸಿಗುತ್ತಿತ್ತು" ಎಂದು ಅಭಿಪ್ರಾಯಪಟ್ಟರು.
ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ಸಚಿವ ಹೆಚ್.ಸಿ. ಬಾಲಕೃಷ್ಣ, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ದೆಹಲಿಗೆ ಹೋಗಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿ ನಮ್ಮ ಹಕ್ಕನ್ನು ಪಡೆದುಕೊಳ್ಳಬೇಕಾಯಿತು ಎಂದು ತಿಳಿಸಿದರು. ಮುಂದುವರಿದು, ಅನುದಾನ ವಿಚಾರದಲ್ಲಿ ಕೇಂದ್ರದ ಮುಂದೆ ಮಾತನಾಡಲು ರಾಜ್ಯದ ಬಿಜೆಪಿ ಸಂಸದರಿಗೆ ಧಮ್ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಸಚಿವರ ಈ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ಸದಸ್ಯರು ಮುಗಿಬಿದ್ದು, ಜವಾಬ್ದಾರಿಯುತ ಸರ್ಕಾರದ ಪ್ರತಿನಿಧಿಯಾಗಿ ಕೇಂದ್ರಕ್ಕೆ ಮನವರಿಕೆ ಮಾಡುವ ಪ್ರಯತ್ನ ಮಾಡಬೇಕೆ ಹೊರತು, ವಿಪಕ್ಷಗಳ ವಿರುದ್ಧ ಈ ರೀತಿ ಆಕ್ರೋಶ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಇದಕ್ಕೆ ತಿರುಗೇಟು ನೀಡಿದ ಸಚಿವ ಬಾಲಕೃಷ್ಣ, ಬರೀ ಬೊಗಳೆ ಭಾಷಣ ಮಾಡುವುದು ಬಿಜೆಪಿಯವರ ಖಯಾಲಿಯಾಗಿದೆ. ಪ್ರಧಾನಿ ಬಳಿ ಹೋಗಿ ರಾಜ್ಯದ ಪರವಾಗಿ ಧ್ವನಿ ಎತ್ತುವ ಧೈರ್ಯ ಸಂಸದರಿಗಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ನಂತರ ಮಾತನಾಡಿದ ಎಸ್. ಅರುಣ್, ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ಖಜಾನೆಯನ್ನು ಬರಿದು ಮಾಡಿದೆ. ರಾಜ್ಯದ ಜಿಡಿಪಿ ಆಧಾರದ ಮೇಲೆ ಶೇಕಡಾ 25ರಷ್ಟು ಸಾಲ ಪಡೆಯಬಹುದಾಗಿದ್ದು, ಈಗಾಗಲೇ ಸರ್ಕಾರ ಶೇಕಡಾ 24.94ರಷ್ಟು ಸಾಲ ಮಾಡಿದೆ. ಹಣವಿಲ್ಲದಿದ್ದರೂ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಿ 32 ಸಾವಿರ ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿದೆ. ಇದಕ್ಕೆ ಹಣವೆಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು. ಅಲ್ಲದೆ, ಪ್ರಧಾನಿಯವರ ಹೃದಯ ವಿಶಾಲವಾಗಿದೆ ಎಂದು ಸಮರ್ಥಿಸಿಕೊಂಡಾಗ, "ಪ್ರಧಾನಿ ಬಳಿ ಮಾತನಾಡಿ ಆ ಹೃದಯವನ್ನು ತೆರೆಸುವವರು ಯಾರೂ ಇಲ್ಲವಲ್ಲ" ಎಂದು ಸಚಿವ ಬಾಲಕೃಷ್ಣ ವ್ಯಂಗ್ಯವಾಡಿದರು.




