ಚಂದ್ರವಳ್ಳಿ ನ್ಯೂಸ್, ಬೆಂಗಳೂರು: ಇದೇ ಆಗಸ್ಟ್ 12ರಂದು 21ನೇ ಶತಮಾನದ ಅತ್ಯಂತ ಅಪರೂಪದ ಖಗ್ರಾಸ ಸೂರ್ಯಗ್ರಹಣ ಸಂಭವಿಸಲಿದ್ದು, ಖಗೋಳಾಸಕ್ತರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಆದರೆ, ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ ಎಂದು ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್.ಟಿ.ಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಗ್ರಹಣವು ಮುಖ್ಯವಾಗಿ ಗ್ರೀನ್‌ಲ್ಯಾಂಡ್, ಐಸ್‌ಲ್ಯಾಂಡ್ ಹಾಗೂ ಸ್ಪೇನ್ ಸೇರಿದಂತೆ ವಿವಿಧ ದೇಶಗಳಲ್ಲಿ ಸ್ಪಷ್ಟವಾಗಿ ಕಂಗೊಳಿಸಲಿದೆ. ಭಾರತೀಯ ಕಾಲಮಾನದ ಪ್ರಕಾರ ಗ್ರಹಣವು ಆಗಸ್ಟ್ 12ರ ರಾತ್ರಿ 9:45ಕ್ಕೆ ಆರಂಭವಾಗಿ, ಮರುದಿನ ಬೆಳಗಿನ ಜಾವ 4:25ರವರೆಗೆ ಇರಲಿದೆ. ಗ್ರಹಣದ ತೀಕ್ಷ್ಣತೆ (ಪೂರ್ಣ ಗ್ರಹಣದ ಸಮಯ) ಸುಮಾರು 6 ನಿಮಿಷಗಳ ಕಾಲ ಇರಲಿದೆ ಎಂದು ಖಗೋಳ ತಜ್ಞರು ಸ್ಪಷ್ಟಪಡಿಸಿದ್ದಾರೆ.
ಭಾರತದಲ್ಲಿ ಗೋಚರಿಸುವುದಿಲ್ಲ, ಮೂಢನಂಬಿಕೆ ಬೇಡ: ಗ್ರಹಣ ನಡೆಯುವ ಸಮಯದಲ್ಲಿ ಭಾರತದಲ್ಲಿ ರಾತ್ರಿಯಾಗಿರುವುದರಿಂದ ಇದು ನಮಗೆ ಕಾಣಿಸುವುದಿಲ್ಲ. ಆದ್ದರಿಂದ ದೇಶದ ಜನರ ಮೇಲೆ ಅಥವಾ ವಾತಾವರಣದ ಮೇಲೆ ಯಾವುದೇ ರೀತಿಯ ಭೌತಿಕ ಅಥವಾ ಜ್ಯೋತಿಷ್ಯ ಪರಿಣಾಮಗಳು ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಗ್ರಹಣದ ಹೆಸರಿನಲ್ಲಿ ಯಾವುದೇ ರೀತಿಯ ಧಾರ್ಮಿಕ ನಿಯಮಗಳು, ಆಚರಣೆಗಳು ಅಥವಾ ಆಹಾರ ವರ್ಜನೆಯಂತಹ ನಿಯಮಗಳನ್ನು ಪಾಲಿಸುವ ಅಗತ್ಯವಿಲ್ಲ.
2040ರಲ್ಲಿ ಭಾರತದಲ್ಲಿ ಖಗ್ರಾಸ ಗ್ರಹಣ: ಭಾರತದಲ್ಲಿ ಮತ್ತೆ ಈ ರೀತಿಯ ಪೂರ್ಣ ಖಗ್ರಾಸ ಸೂರ್ಯಗ್ರಹಣವನ್ನು ವೀಕ್ಷಿಸಲು 2040ರವರೆಗೆ ಕಾಯಬೇಕಾಗುತ್ತದೆ. ಪ್ರಕೃತಿಯ ಈ ವಿಸ್ಮಯಕಾರಿ ಘಟನೆಯನ್ನು ವೈಜ್ಞಾನಿಕ ಕೋನದಿಂದ ನೋಡಬೇಕೇ ಹೊರತು ಮೂಢನಂಬಿಕೆಗಳಿಗೆ ಒಳಗಾಗಬಾರದು. ಸಾರ್ವಜನಿಕರು ಖಗೋಳ ಘಟನೆಗಳ ಕುರಿತು ವೈಚಾರಿಕ ಚಿಂತನೆ ಹಾಗೂ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಎಚ್.ಎಸ್.ಟಿ.ಸ್ವಾಮಿ ಕರೆ ನೀಡಿದ್ದಾರೆ.




