ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದಲ್ಲಿದ್ದ ಬ್ರಿಟಿಷ್ ಡೆಪ್ಯೂಟಿ ಹೈಕಮಿಷನರ್ ಹಾಗೂ ದಕ್ಷಿಣ ಏಷ್ಯಾದ ಬ್ರಿಟನ್ಉಪ ವ್ಯಾಪಾರ ಕಮಿಷನರ್ ಚಂದ್ರು ಅಯ್ಯರ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ರಾಜ್ಯಕ್ಕೆ ಅವರು ನೀಡಿದ ಕೊಡುಗೆ ಮತ್ತು ಬೆಂಬಲಕ್ಕಾಗಿ ವೈಯಕ್ತಿಕವಾಗಿ ಹಾಗೂ ಕರ್ನಾಟಕ ಸರ್ಕಾರದ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ಈ ಕುರಿತು ಮಾತನಾಡಿರುವ ಸಚಿವರು, "ಚಂದ್ರು ಅಯ್ಯರ್ ಅವರು ಕರ್ನಾಟಕದ ಆತ್ಮೀಯ ಸ್ನೇಹಿತರಾಗಿದ್ದು, ನಮ್ಮ ಕೈಗಾರಿಕಾ ಇಲಾಖೆಯ ಪ್ರಮುಖ ಯೋಜನೆಗಳು, ಯುಕೆ ಹಾಗೂ ಯುರೋಪ್ ಒಕ್ಕೂಟದೊಂದಿಗಿನ ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸಲು ಮತ್ತು ರಾಜ್ಯದಲ್ಲಿ ಬಂಡವಾಳ ಹೂಡಿಕೆಯನ್ನು ಉತ್ತೇಜಿಸಲು ಗಮನಾರ್ಹ ಪಾತ್ರ ವಹಿಸಿದ್ದಾರೆ," ಎಂದು ಪ್ರಶಂಸಿದರು.
"ನಮ್ಮ ಕೈಗಾರಿಕಾ ನಿಯೋಗವು ಬ್ರಿಟನ್ ಮತ್ತು ಯುರೋಪ್ ಪ್ರವಾಸ ಕೈಗೊಂಡಿದ್ದಾಗ, ಅಲ್ಲಿ ನಡೆದ ರೋಡ್ಶೋಗಳು ಹಾಗೂ ಸಭೆ-ಸಮಾರಂಭಗಳಲ್ಲಿ ಅವರು ನೀಡಿದ ಸಕ್ರಿಯ ಸಹಕಾರ ಮತ್ತು ತೊಡಗಿಸಿಕೊಳ್ಳುವಿಕೆ ಸದಾ ಸ್ಮರಣೀಯ," ಎಂದು ಸಚಿವರು ನೆನಪಿಸಿಕೊಂಡರು.
ಚಂದ್ರು ಅಯ್ಯರ್ ಅವರು ಸದಾ ಕರ್ನಾಟಕದ ಹಿತೈಷಿಯಾಗಿರಲಿದ್ದಾರೆ ಎಂದ ಸಚಿವರು, ಅವರ ಮುಂದಿನ ಹೊಸ ಜವಾಬ್ದಾರಿಗಳು ಹಾಗೂ ಭವಿಷ್ಯದ ಜೀವನಕ್ಕೆ ಶುಭ ಹಾರೈಸಿ, ಮುಂಬರುವ ದಿನಗಳಲ್ಲೂ ಈ ಸೌಹಾರ್ದಯುತ ಸಂಬಂಧ ಮುಂದುವರಿಯಲಿ ಎಂದು ಆಶಿಸಿದರು.




