ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸರಕು ಸಾಗಣೆ ವಾಹನ ಅಪಘಾತದಲ್ಲಿ ಸಾವಿಗೀಡಾದ ಬ್ರಾಯ್ಲರ್ ಕೋಳಿಗಳನ್ನು 'ಜೀವಸಂಪತ್ತು' ಹಾಗೂ 'ಸರಕು' ಎಂದೇ ಪರಿಗಣಿಸಬೇಕಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್‌ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ, ಅಪಘಾತದಲ್ಲಿ ಮೃತಪಟ್ಟ ಕೋಳಿಗಳಿಗೆ ವಿಮಾ ಕಂಪನಿಯು ಪರಿಹಾರ ನೀಡುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದೆ.
ಕೋಳಿಗಳಿಗೆ ಪರಿಹಾರ ನೀಡುವಂತೆ ಮೋಟಾರು ವಾಹನ ಅಪಘಾತಗಳ ಪರಿಹಾರ ನ್ಯಾಯಾಧಿಕರಣ ನೀಡಿದ್ದ ಆದೇಶವನ್ನು ಪ್ರಶ್ನಿಸಿ 'ರಿಲಯನ್ಸ್‌ಜನರಲ್ ಇನ್ಸೂರೆನ್ಸ್ ಕಂಪನಿ' ಸಲ್ಲಿಸಿದ್ದ ಮೇಲ್ಮನವಿ ಹಾಗೂ ಹೆಚ್ಚುವರಿ ಪರಿಹಾರ ಕೋರಿ ಮಾಲೀಕ ಕೆ.ವೀರನಾರಾಯಣ ಸ್ವಾಮಿ ಸಲ್ಲಿಸಿದ್ದ ಅರ್ಜಿಯ ಜಂಟಿ ವಿಚಾರಣೆ ನಡೆಸಿದ ಹೈಕೋರ್ಟ್‌ನ ಧಾರವಾಡ ಪೀಠದ ನ್ಯಾಯಮೂರ್ತಿ ಕೆ.ಬಿ. ಗೀತಾ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.
"ಕರ್ನಾಟಕ ಮೋಟಾರು ವಾಹನ ನಿಯಮಗಳಲ್ಲಿ ಕೋಳಿಯ:
ಉಲ್ಲೇಖವಿಲ್ಲದಿದ್ದರೂ, ಮೋಟಾರು ವಾಹನ ಕಾಯ್ದೆ-1988ರ ಸೆಕ್ಷನ್ 2(13)ರ ಪ್ರಕಾರ 'ಸರಕು' ಎಂಬ ಪದವು ಜೀವಸಂಪತ್ತನ್ನು ಒಳಗೊಂಡಿರುತ್ತದೆ. ಕೋಳಿಗಳೂ ಸಹ ಜೀವವಿರುವ ಪ್ರಾಣಿ/ಪಕ್ಷಿಗಳಾಗಿರುವುದರಿಂದ ಅವುಗಳನ್ನು ಜೀವಸಂಪತ್ತು ಹಾಗೂ ಸರಕು ಎಂದು ಪರಿಗಣಿಸುವುದು ಸೂಕ್ತ" ಎಂದು ಪೀಠ ತಿಳಿಸಿದೆ.
ಬಡ್ಡಿ ದರ ಶೇ. 6ಕ್ಕೆ ಇಳಿಕೆ:
ಬಳ್ಳಾರಿಯ ಮೋಟಾರು ವಾಹನ ಅಪಘಾತಗಳ ಪರಿಹಾರ ನ್ಯಾಯಾಧಿಕರಣವು ಮಾಲೀಕರಿಗೆ ವಿಧಿಸಿದ್ದ 4,51,000 ಪರಿಹಾರ ಮೊತ್ತವನ್ನು ಹೈಕೋರ್ಟ್ ಎತ್ತಿಹಿಡಿದಿದೆಯಾದರೂ, ನ್ಯಾಯಾಧಿಕರಣ ವಿಧಿಸಿದ್ದ ಶೇ. 7ರಷ್ಟು ಬಡ್ಡಿದರವನ್ನು ಶೇ. 6ಕ್ಕೆ ಇಳಿಸಿ ಆದೇಶಿಸಿದೆ. ಇದೇ ವೇಳೆ, ಹೆಚ್ಚುವರಿ ಪರಿಹಾರ ಕೋರಿ ಮಾಲೀಕ ವೀರನಾರಾಯಣಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ:
ಬಳ್ಳಾರಿಯ 'ಬಾಲಾಜಿ ಪೌಲ್ಟ್ರಿ ಫಾರ್ಮ್' ಮಾಲೀಕರಾದ ಕೆ.ವೀರ ನಾರಾಯಣಸ್ವಾಮಿ ಅವರು 2013ರ ಜೂನ್ 18ರಂದು ಚಳ್ಳಕೆರೆಯಿಂದ 2,250 ಬ್ರಾಯ್ಲರ್ ಕೋಳಿಗಳನ್ನು ಖರೀದಿಸಿ ಐಚರ್ ವಾಹನದಲ್ಲಿ ಒಯ್ಯುತ್ತಿದ್ದಾಗ, ಜೂನ್ 19ರ ಮುಂಜಾನೆ ವಾಹನ ಪಲ್ಟಿಯಾಗಿ 2,000 ಕೋಳಿಗಳು ಮೃತಪಟ್ಟಿದ್ದವು. ಇದರಿಂದ ತಮಗಾದ ನಷ್ಟಕ್ಕೆ 5,90,000 ಪರಿಹಾರ ಕೋರಿ ಅವರು ನ್ಯಾಯಾಧಿಕರಣ ಮೆಟ್ಟಿಲೇರಿದ್ದರು. ಕೋಳಿಗಳು ಜಾನುವಾರು ಅಥವಾ ಜೀವಸಂಪತ್ತಿನ ವ್ಯಾಪ್ತಿಗೆ ಬರುವುದಿಲ್ಲ ಎಂಬ ವಿಮಾ ಕಂಪನಿಯ ವಾದವನ್ನು ಹೈಕೋರ್ಟ್ ಇದೀಗ ತಳ್ಳಿಹಾಕಿದೆ.




