ಚಂದ್ರವಳ್ಳಿ ನ್ಯೂಸ್, ಮಂಗಳೂರು:
ಕರಾವಳಿಯ ಸಾಂಪ್ರದಾಯಿಕ ಉಪಹಾರ ಸವಿಯುತ್ತಲೇ ಕರಾವಳಿ ನಗರದ ಯುವಕರ ಕನಸು, ಆಶಯ ಹಾಗೂ ಭವಿಷ್ಯದ ಯೋಜನೆಗಳನ್ನು ಕೇಳುವ ಮೂಲಕ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಮಂಗಳೂರಿನಲ್ಲಿ ವಿಶೇಷ ಸಂವಾದ ನಡೆಸಿದರು.
ನಗರದ ಗಾಂಧಿ ಸ್ಕ್ವೇರ್ ಕೆಫೆಯಲ್ಲಿ ಬೆಳಗಿನ ಉಪಹಾರ ಸೇವಿಸಿದ ಡಿ.ಕೆ. ಶಿವಕುಮಾರ್, ಸ್ಥಳೀಯ ಯುವ ಕ್ರಿಯೇಟರ್ಸ್‌ಮತ್ತು ಯುವಜನರೊಂದಿಗೆ ಮುಕ್ತವಾಗಿ ಮಾತುಕತೆ ನಡೆಸಿದರು.
ಈ ವೇಳೆ ಮಂಗಳೂರು ನಗರದ ಅಭಿವೃದ್ಧಿ, ಇಲ್ಲಿರುವ ಹೊಸ ಅವಕಾಶಗಳು ಹಾಗೂ ಯುವಜನತೆ ಹೊಂದಿರುವ ಕನಸುಗಳ ಕುರಿತು ಯುವಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಕರಾವಳಿಯ ಕಮಟು: ಮಂಗಳೂರಿನ ಪ್ರಸಿದ್ಧ 'ಮಂಗಳೂರು ಬನ್ಸ್', 'ಗೋಳಿಬಜೆ' ಹಾಗೂ 'ಶಾವಿಗೆ ರಸಾಯನ' ಸವಿಯುತ್ತಾ ಪ್ರಾತಃಕಾಲದ ಈ ಭೇಟಿಯನ್ನು ಆನಂದಿಸಿದ ಮುಖ್ಯಮಂತ್ರಿಗಳು, ಯುವಜನತೆಯ ಹೊಸ ಆಲೋಚನೆಗಳು ಹಾಗೂ ಸೃಜನಶೀಲ ಆಶಯಗಳಿಗೆ ಶ್ಲಾಘನೆ ವ್ಯಕ್ತಪಡಿಸಿದರು. ಪ್ರಾದೇಶಿಕ ಖಾದ್ಯಗಳ ರುಚಿಯೊಂದಿಗೆ ಆರಂಭವಾದ ಈ ಬೆಳಗಿನ ಸಂವಾದ ಕರಾವಳಿಯ ಜನಪರ ಒಡನಾಟಕ್ಕೆ ಸಾಕ್ಷಿಯಾಯಿತು.




