ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿಕ್ಕಪ್ಪನಹಳ್ಳಿ ಷಣ್ಮುಖ ಅವರು ತಮ್ಮ ಹಿತಾಸಕ್ತಿ, ಸುಖ-ಸಂತೋಷಗಳ ಕಂಫರ್ಟ್ ಝೋನ್ನಿಂ್ದ ಹೊರಬಂದು, ಸಾರ್ವಜನಿಕ ಹಿತಾಸಕ್ತಿ ಮತ್ತು ಸಾಮಾಜಿಕ ಸಮಾನತೆಗಾಗಿ ಸದಾ ಧ್ವನಿ ಎತ್ತುವ ಅಪರೂಪದ ಹೋರಾಟ ಮನೋಭಾವದ ಪತ್ರಕರ್ತರಾಗಿದ್ದಾರೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ ‘ಚಿಕ್ಕಪ್ಪನಹಳ್ಳಿ ಗೆಳೆಯರ ಬಳಗ'ದ ವತಿಯಿಂದ ಆಯೋಜಿಸಲಾಗಿದ್ದ ‘ಕೋಟೆನಾಡಿನ ನಾಗರಿಕ ಗೌರವ ಸನ್ಮಾನ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಪತ್ರಕರ್ತರು ಅಥವಾ ಯಾವುದೇ ಕ್ಷೇತ್ರದಲ್ಲಿರುವವರು ತಮ್ಮ ವೃತ್ತಿ, ಕುಟುಂಬ ಮತ್ತು ಭವಿಷ್ಯದ ಸುರಕ್ಷತೆಯ ಬಗ್ಗೆ ಯೋಚಿಸಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಆದರೆ ಷಣ್ಮುಖ ಅವರು ಸಮಾಜದ ಕೆಳಹಂತದ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ, ಪ್ರಾಣಭಯ, ಯಾವುದೇ ಅಡೆತಡೆಗಳನ್ನ ಲೆಕ್ಕಿಸದೆ ಸಾರ್ವಜನಿಕ ಹಿತಾಸಕ್ತಿಗಾಗಿ ನಿರಂತರವಾಗಿ ಧ್ವನಿ ಎತ್ತಿದ್ದಾರೆ ಎಂದರು.
2008ರಲ್ಲಿ ತಾವು ಚಳ್ಳಕೆರೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಸಮಯದಿಂದಲೂ ಷಣ್ಮುಖ ಅವರನ್ನು ಹತ್ತಿರದಿಂದ ಕಂಡಿದ್ದೇನೆ. ಅವರು ಯಾವತ್ತೂ ಸ್ವಂತ ಲಾಭಕ್ಕಾಗಿ ಮಾತನಾಡಿದವರಲ್ಲ, ಬದಲಾಗಿ ಸಮಾಜದ ಪ್ರಗತಿ ಮತ್ತು ಸಾರ್ವಜನಿಕ ವಿಷಯಗಳ ಕುರಿತಾಗಿಯೇ ಚರ್ಚಿಸುತ್ತಿದ್ದರು. ಎಡಪಂಥೀಯ ಚಿಂತನೆಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಸಮಾನತೆ ಬಯಸಿದ ವ್ಯಕ್ತಿ ಎಂದು ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆ ಹಾಗೂ ವಾಣಿ ವಿಲಾಸ ಸಾಗರದಿಂದ ಚಳ್ಳಕೆರೆ ಕ್ಷೇತ್ರಕ್ಕೆ 0.5 ಟಿಎಂಸಿ ನೀರು ಕಾಯ್ದಿರಿಸುವ ಹೋರಾಟದಲ್ಲಿ ಷಣ್ಮುಖ ಅವರ ಪತ್ರಿಕಾ ಬರಹಗಳ ಪಾತ್ರ ಅತ್ಯಂತ ಪ್ರಮುಖವಾದದ್ದು. ಚಳ್ಳಕೆರೆಗೆ ನೀರು ತಲುಪಲೇಬೇಕು ಎಂದು ಪತ್ರಿಕೆಗಳಲ್ಲಿ ಸರಣಿ ಲೇಖನಗಳನ್ನು ಬರೆಯುವ ಮೂಲಕ ಸರ್ಕಾರದ ಗಮನ ಸೆಳೆದಿದ್ದರು. ಶಾಸಕನಾಗಿ ನಾನು ಸರ್ಕಾರಿ ಮಟ್ಟದಲ್ಲಿ ಆದೇಶ ತರಲು ಶ್ರಮಿಸಿದಾಗ, ಇವರ ನಿಷ್ಠುರ ಬರಹಗಳು ನಮಗೆ ದೊಡ್ಡ ಬೆಂಬಲವಾಗಿದ್ದವು ಎಂದು ಸಚಿವರು ನೆನಪಿಸಿಕೊಂಡರು.
ಸಮಾಜದ ಆಸ್ತಿ ಮತ್ತು ಸಂಪನ್ಮೂಲಗಳು ಎಲ್ಲರಿಗೂ ದೊರೆಯಬೇಕು ಎಂಬ ಸಮಾನತೆಯ ಮನೋಭಾವ ಅವರಲ್ಲಿದೆ. ಕೇವಲ ವೈಯಕ್ತಿಕ ಲಾಭಕ್ಕೆ ಒಗ್ಗಿಕೊಳ್ಳದೆ, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಕಳಕಳಿಯಿಂದ ಪತ್ರಿಕೋದ್ಯಮ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ನನ್ನ ರಾಜಕೀಯ ಜೀವನದ ಆರಂಭದಿಂದಲೂ ಹೆಜ್ಜೆ ಹೆಜ್ಜೆಗೂ ತಪ್ಪುಗಳನ್ನು ತಿದ್ದಿ, ಸರಿಯಾದ ದಾರಿಯಲ್ಲಿ ಮುನ್ನಡೆಸಿದ ಷಣ್ಮುಖಣ್ಣ ಅವರು ನನ್ನ ಪಾಲಿಗೆ ಮಾರ್ಗದರ್ಶಿ ಗುರು ಇದ್ದಂತೆ ಎಂದು ಹೇಳಿದರು.
ಚಿತ್ರದುರ್ಗದ ಕೋಟೆಯ ಹಿಂದೆ ಪ್ರಸಿದ್ಧ ಇತಿಹಾಸವಿದ್ದರೆ, ಕೋಟೆಯ ಮುಂಭಾಗದಲ್ಲಿ ನಮ್ಮ ಚಿತ್ರದುರ್ಗದ ವರ್ತಮಾನ ಹಾಗೂ ಕನಸುಗಳು ಅಡಗಿವೆ. ಆ ಕನಸುಗಳನ್ನು ತಮ್ಮ ಸರಣಿ ಲೇಖನಗಳ ಮೂಲಕ ಅಕ್ಷರರೂಪಕ್ಕೆ ತಂದವರು ಷಣ್ಮುಖಣ್ಣ. ನಗರದ ರಸ್ತೆ ಅಗಲೀಕರಣ ಹೇಗೆ ಆಗಬೇಕು? ಡಿವೈಡರ್ಗಣಳಿಂದ ಸಾರ್ವಜನಿಕರಿಗೆ ಎಷ್ಟೊಂದು ತೊಂದರೆಯಾಗುತ್ತಿದೆ? ಎಂಬುದನ್ನು ಪತ್ರಿಕೆಯಲ್ಲಿ ಸರಣಿಯಾಗಿ ಬರೆದು ಜನರ ಧ್ವನಿಯಾಗಿ ಕೆಲಸ ಮಾಡಿದ್ದಾರೆ ಎಂದು ಶಾಸಕರು ಸ್ಮರಿಸಿದರು.
ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ ಮಾತನಾಡಿ, ಷಣ್ಮುಖ ಅವರೊಂದಿಗೆ ನನಗೆ ಸುಮಾರು 50 ವರ್ಷಗಳ ದೀರ್ಘಾವಧಿಯ ಸ್ನೇಹ ಹಾಗೂ ಒಡನಾಟವಿದೆ. 1986 ರಿಂದ ನಾನು ಸಾರ್ವಜನಿಕ ರಂಗದಲ್ಲಿದ್ದಾಗ ಆರಂಭದಲ್ಲಿ ಅವರು ತಮ್ಮ ಬರವಣಿಗೆಗಳ ಮೂಲಕ ನಮಗೆ ‘ವೈರಿ’ಯಂತೆಯೇ ಸಿಕ್ಕಿದ್ದರು. ಆದರೆ ಆ ವೈರುಧ್ಯದ ಬರವಣಿಗೆಯಲ್ಲಿ ಸದಾ ಸತ್ಯಾಂಶ ಮತ್ತು ಜನಪರ ಕಾಳಜಿಯಿತ್ತು. ಅಧಿಕಾರಿಗಳು, ಜನಪ್ರತಿನಿಧಿಗಳು ಕೆಲಸ ಮಾಡುವಾಗ ಲೋಪಗಳು ಸಹಜ. ನಮ್ಮ ತಪ್ಪುಗಳನ್ನು ತಿದ್ದಿ ಸರಿ ಹಾದಿಗೆ ತರಲು ಅವರ ವರದಿಗಳು ನಮಗೆ ಕಣ್ಣು ತೆರೆಸುವಂತೆ ಮಾಡುತ್ತಿದ್ದವು ಎಂದರು.
ಸಾಮಾನ್ಯವಾಗಿ ಪತ್ರಕರ್ತರು ನಿಯಮಿತವಾಗಿ ಸುದ್ದಿ ಬರೆದು ತಮ್ಮ ಕರ್ತವ್ಯ ಮುಗಿಸುತ್ತಾರೆ. ಆದರೆ ಷಣ್ಮುಖ ಅವರ ಶೈಲಿ ವಿಶಿಷ್ಟವಾದುದು. ಅವರು ಸಮಸ್ಯೆಗಳ ಬಗ್ಗೆ ಪತ್ರಿಕೆಯಲ್ಲಿ ಬರೆದು ಸುಮ್ಮನಾಗುವುದಿಲ್ಲ; ಆ ಸಮಸ್ಯೆಗೆ ಪೂರ್ಣ ಪರಿಹಾರ ಸಿಗುವವರೆಗೂ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಚಿವರ ಮಟ್ಟದಲ್ಲಿ ನಿರಂತರವಾಗಿ ಬೆನ್ನತ್ತಿ ಹೋರಾಟ ನಡೆಸುತ್ತಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಧ್ವನಿಯಾಗಿ ನಿಲ್ಲುವ ಗುಣ ಅವರಲ್ಲಿದೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆಯಡಿ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಗೆ ನೀರು ತರಲೇಬೇಕು ಎಂದು ರೈತರು ಹಾಗೂ ಪ್ರಗತಿಪರ ಚಿಂತಕರನ್ನು ಒಗ್ಗೂಡಿಸಿ ಹೋರಾಟ ರೂಪಿಸಿದವರು ಚಿಕ್ಕಪ್ಪನಹಳ್ಳಿ ಷಣ್ಮುಖಪ್ಪ ಎಂದು ಸ್ಮರಿಸಿದ ಅವರು, ಚಿತ್ರದುರ್ಗದಲ್ಲಿ ಅವರನ್ನು ಬೈಯುವವರಿಗಿಂತ ನೂರು ಪಟ್ಟು ಹೆಚ್ಚು ಪ್ರೀತಿಸುವ ಜನರಿದ್ದಾರೆ. ಇಂತಹ ಸಮಾಜಮುಖಿ ವ್ಯಕ್ತಿ ನಮ್ಮ ನಗರಕ್ಕೆ ಅಗತ್ಯವಾಗಿದ್ದಾರೆ ಎಂದು ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ಮಾಧ್ಯಮ ಕ್ಷೇತ್ರಕ್ಕೆ ಸೀಮಿತವಾಗದೆ ಸಾಮಾಜಿಕ ಹೋರಾಟಗಳ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದ ಚಿಕ್ಕಪ್ಪನಹಳ್ಳಿ ಷಣ್ಮುಖ ಅವರು ಕೋಟೆನಾಡಿನ ಪ್ರಾಮಾಣಿಕ ಹಾಗೂ ದಿಟ್ಟ ಪತ್ರಕರ್ತರಾಗಿದ್ದಾರೆ ಎಂದು ಬಣ್ಣಿಸಿದರು.
ಜಿಲ್ಲೆಯ ಜ್ವಲಂತ ಸಮಸ್ಯೆಗಳು, ಅಭಿವೃದ್ಧಿ ಯೋಜನೆಗಳು ಮತ್ತು ಆಡಳಿತಾತ್ಮಕ ವೈಫಲ್ಯಗಳನ್ನು ಪತ್ರಿಕೆ ಮೂಲಕ ನಿರಂತರವಾಗಿ ಬೆಳಕಿಗೆ ತಂದಿದ್ದಾರೆ. ಮೇಲ್ನೋಟಕ್ಕೆ ಷಣ್ಮುಖ ಹಾಗೂ ನಾನು ಉತ್ತಮ ಸ್ನೇಹಿತರಾಗಿದ್ದರೂ, ರಾಜಕೀಯದಲ್ಲಿ ನನ್ನ ಆಡಳಿತಾವಧಿಯಲ್ಲಿ ನಮಗೆ ಅತ್ಯಂತ ಹೆಚ್ಚು ‘ಕಾಟ' ಕೊಟ್ಟವರು ಹಾಗೂ ಸವಾಲೊಡ್ಡಿದವರು ಅವರೇ. ಆದರೆ, ಆ ವಿರೋಧವು ವೈಯಕ್ತಿಕವಾಗಿರಲಿಲ್ಲ. ಬದಲಾಗಿ ಸಾರ್ವಜನಿಕ ಹಿತಾಸಕ್ತಿಯ ಧ್ವನಿಯಾಗಿತ್ತು ಎಂದರು.
ಪತ್ರಿಕೋದ್ಯಮ ಮತ್ತು ಸಮಾಜಮುಖಿ ಹೋರಾಟಗಳಲ್ಲಿ ತೊಡಗಿಸಿಕೊಂಡಾಗ ಅನೇಕ ರೀತಿಯ ಸವಾಲುಗಳು ಹಾಗೂ ಶತ್ರುತ್ವವನ್ನು ಎದುರಿಸಬೇಕಾಗುತ್ತದೆ. ಹಾಗಾಗಿ, ಪತ್ರಕರ್ತರಿಗೆ ಸರ್ಕಾರ ಕಾನೂನಾತ್ಮಕವಾಗಿ ಸೂಕ್ತ ಭದ್ರತೆ ಹಾಗೂ ಬೆಂಬಲ ನೀಡುವ ನಿಟ್ಟಿನಲ್ಲಿ ವಿಶೇಷ ಚಿಂತನೆ ನಡೆಸಬೇಕು ಎಂದು ಅಭಿಪ್ರಾಯಪಟ್ಟರು.
ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವ ವರದಿಗಾರರಿಗೆ ಯಾವುದೇ ಭದ್ರತೆಯ ನಿರೀಕ್ಷೆ ಇರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಅವರ ಮೇಲೆ ಆಗುವ ಅನ್ಯಾಯ ಹಾಗೂ ದಾಳಿಗಳನ್ನು ತಡೆಯಲು ಸರ್ಕಾರ ವಿಶೇಷವಾಗಿ ಸುರಕ್ಷತಾ ಕ್ರಮ ಹಾಗೂ ಚಿಂತನೆ ರೂಪಿಸಬೇಕಾಗಿದೆ. ಷಣ್ಮುಖ ಅವರ ಸುದೀರ್ಘ ಸಾಮಾಜಿಕ ಹಾಗೂ ಪತ್ರಿಕಾರಂಗದ ಸೇವೆಯಲ್ಲಿ ಅವರ ಧರ್ಮ ಪತ್ನಿಯವರ ಸಹನೆ ಮತ್ತು ತ್ಯಾಗ ಅಪಾರವಾದದ್ದು. ಅವರ ಬೆಂಬಲವಿಲ್ಲದೆ ಈ ಹಂತವನ್ನು ತಲುಪಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಚಿಕ್ಕಪ್ಪನಹಳ್ಳಿ ಗೆಳೆಯ ಬಳಗದ ವತಿಯಿಂದ ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಅವರಿಗೆ ಕೋಟೆನಾಡಿನ ನಾಗರಿಕ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್ಪೀತರ್, ರೈತ ಸಂಘದ ಜಿಲ್ಲಾ ಅಧ್ಯಕ್ಷ ಧನಂಜಯ, ಗುತ್ತಿಗೆದಾರರ ಸಂಘದ ರಾಜ್ಯ ಅಧ್ಯಕ್ಷ ಮಂಜುನಾಥ್, ಹಿರಿಯ ಪತ್ರಕರ್ತ ಬಿ.ವಿ.ಮಲ್ಲಿಕಾರ್ಜುನಯ್ಯ ಸೇರಿದಂತೆ ಮತ್ತಿತರರು ಇದ್ದರು.




