ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕನಿಷ್ಠ ವೇತನ ಅಧಿಸೂಚನೆಯನ್ನು ಜಾರಿಗೊಳಿಸದಂತೆ ತಡೆಯುತ್ತಿದ್ದ ರಾಜ್ಯ ಸರ್ಕಾರದ ಅಡಿಯ ವಿವಿಧ ಇಲಾಖೆಗಳು ಹೊರಡಿಸಿದ್ದ 3 ಸುತ್ತೋಲೆಗಳಿಗೆ ಕರ್ನಾಟಕ ಹೈಕೋರ್ಟ್ ದಿನಾಂಕ: 18-09-2026 ರಂದು ತಡೆಯಾಜ್ಞೆ ನೀಡಿದೆ ಎಂದು ಸಿಐಟಿಯು (ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಅಧ್ಯಕ್ಷ ಮೀನಾಕ್ಷಿ ಸುಂದರಂ ಅವರು ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸಿಐಟಿಯು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಹೈಕೋರ್ಟ್ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಅವರ ಪೀಠವು, ಸಿಐಟಿಯು ಮತ್ತು ನಾಲ್ಕು ಕಾರ್ಮಿಕ ಸಂಘಟನೆಗಳು ಸಲ್ಲಿಸಿದ ರಿಟ್ ಅರ್ಜಿ ವಿಚಾರಣೆ ವೇಳೆ ಈ ಮಧ್ಯಂತರ ಆದೇಶ ನೀಡಿದೆ ಎಂದರು.
ಮಧ್ಯಂತರ ಆದೇಶದಿಂದಾಗಿ, ಮೇಲಿನ ಸುತ್ತೋಲೆಗಳ ಮತ್ತು ಅಧಿಸೂಚನೆಗಳ ಜಾರಿಗೆ ಸದ್ಯಕ್ಕೆ ತಡೆ ಬಿದ್ದಿದೆ. ಇದರಿಂದ ದಿನಾಂಕ 22.05.2026 ರ ಕನಿಷ್ಠ ವೇತನ ಅಧಿಸೂಚನೆ KAEE 411 LDW 2023 ಜಾರಿಗೆ ಯಾವುದೇ ಅಡೆ ತಡೆಗಳಿರುವುದಿಲ್ಲ ಕಾರ್ಮಿಕರು ಅಧಿಸೂಚಿತ ಕನಿಷ್ಠ ವೇತನ ಪಡೆಯಲು ಅರ್ಹರಾಗುತ್ತಾರೆ ಎಂದು ಪ್ರಕಟಣೆ ತಿಳಿಸಿದೆ ಎಂದರು.
ರಾಜ್ಯ ಸರ್ಕಾರವು 22.05.2026 ರಂದು ಕನಿಷ್ಠ ವೇತನ ಅಧಿಸೂಚನೆ ಸಂಖ್ಯೆ KAEE 411 LDW 2023 ಅನ್ನು ಹೊರಡಿಸಿತ್ತು. ಈ ಅಧಿಸೂಚನೆಯಡಿ ಬರುವ ಎಲ್ಲಾ ಕಾರ್ಮಿಕರಿಗೆ ಅದರಲ್ಲಿ ನಿಗದಿಪಡಿಸಿದ ದರಕ್ಕಿಂತ ಕಡಿಮೆಯಿಲ್ಲದಂತೆ 22.05.2026 ರಿಂದಲೇ ವೇತನ ನೀಡಬೇಕಿತ್ತು. ಆದರೆ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಈ ಅಧಿಸೂಚನೆಯನ್ನು ಜಾರಿಗೊಳಿಸದಂತೆ ಸುತ್ತೋಲೆಗಳು, ಅಧಿಸೂಚನೆಗಳು ಮತ್ತು ಆದೇಶಗಳನ್ನು ಹೊರಡಿಸಿದವು. ಈ ಕ್ರಮವನ್ನು ಪ್ರಶ್ನಿಸಿ ಐದು ಕಾರ್ಮಿಕ ಸಂಘಟನೆಗಳು ಹೈಕೋರ್ಟ್ ಮೆಟ್ಟಿಲೇರಿದ್ದವು ಎಂದು ತಿಳಿಸಿದರು.
ಅರ್ಜಿದಾರರಾದ ಐದು ಸಂಘಟನೆಗಳು ಕರ್ನಾಟಕ ರಾಜ್ಯ ಸರ್ಕಾರಿ ಖಾಯಮೇತರ ನೌಕರರ ಒಕ್ಕೂಟ, ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘ, ತುಮಕೂರು ಜಿಲ್ಲಾ ನೀರು ಸರಬರಾಜು ನೌಕರರ ಸಂಘ, ತುಮಕೂರು ನಗರ ಪಾಲಿಕೆ ಕಸದ ಆಟೋ ಚಾಲಕರು ಮತ್ತು ಸಹಾಯಕರ ಸಂಘ, ಸೆಂಟರ್ ಆಫ್ ಇಂಡಿಯನ್ ಟ್ರೇಡ್‌ಯೂನಿಯನ್ಸ್, ಕರ್ನಾಟಕ ರಾಜ್ಯ ಸಮಿತಿಗಳ ಪರವಾಗಿ ವಕೀಲ ಎಲ್. ಮುರಳೀಧರ ಪೇಶ್ವಾ ಅವರು ವಾದಿಸಿದರು.
ಈ ಮೇಲಿನ ಸುತ್ತೋಲೆಗಳನ್ನು ರದ್ದುಗೊಳಿಸಿ ದಿನಾಂಕ:22.05.2026ರ ಕನಿಷ್ಠ ವೇತನ ಅಧಿಸೂಚನೆಯನ್ನು ತಕ್ಷಣ ಜಾರಿಗೊಳಿಸಿ, ಅದರಲ್ಲಿ ನಿಗದಿಪಡಿಸಿದ ದರಕ್ಕಿಂತ ಕಡಿಮೆಯಿಲ್ಲದಂತೆ ವೇತನ ನೀಡುವಂತೆ ನಿರ್ದೇಶಿಸುವ ರಿಟ್ ಆಫ್ ಮ್ಯಾಂಡಮಸ್ ಅನ್ನು ಅರ್ಜಿದಾರ ಸಂಘಟನೆಗಳು ಸಲ್ಲಿಸಿದ್ದವು.
ಹಣಕಾಸು ಇಲಾಖೆ ಮತ್ತು ಕ್ಯಾಬಿನೆಟ್ ಉಪ ಸಮಿತಿ ಆದೇಶವನ್ನು ಅಧಿಕಾರ ರಹಿತ ಹಾಗೂ ಕನಿಷ್ಠ ವೇತನ ಅಧಿಸೂಚನೆಯನ್ನು ಸ್ಥಗಿತಗೊಳಿಸಲು ಅಸಮರ್ಥ ಎಂದು ಘೋಷಿಸುವುದು, ಈ ಸುತ್ತೋಲೆಗಳು ಮತ್ತು ಆದೇಶಗಳು ಕಾನೂನುಬಾಹಿರ, ಅಧಿಕಾರಾತೀತ, ದುರುದ್ದೇಶಪೂರಿತ ಮತ್ತು ಸಂವಿಧಾನದ ಅನುಚ್ಛೇದ 14 (ಸಮಾನತೆಯ ಹಕ್ಕು), 21 (ಜೀವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು) ಹಾಗೂ 23 (ಶೋಷಣೆಯ ವಿರುದ್ಧದ ಹಕ್ಕು) ಉಲ್ಲಂಘನೆ ಎಂದು ಅರ್ಜಿದಾರರು ವಾದಿಸಿದ್ದರು.
"ದಿನಾಂಕ:18-09-2026ರ ಹೈಕೋರ್ಟ್ ಆದೇಶವು ಕಾರ್ಮಿಕರ ಪಾಲಿಗೆ ದೊಡ್ಡ relief. ಕನಿಷ್ಠ ವೇತನ ಅಧಿಸೂಚನೆಯನ್ನು ಜಾರಿಗೊಳಿಸದಂತೆ ತಡೆಯುತ್ತಿದ್ದ ಆದೇಶಗಳಿಗೆ ತಡೆ ಬಿದ್ದಿರುವುದರಿಂದ ಸರ್ಕಾರವು ತಕ್ಷಣವೇ ಅಧಿಸೂಚನೆಯನ್ನು ಜಾರಿಗೊಳಿಸಬೇಕು ಮತ್ತು ಕಾರ್ಮಿಕರಿಗೆ ಅವರ ಹಕ್ಕನ್ನು ನೀಡಬೇಕು," ಎಂದು ಸಿಐಟಿಯು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯು ಈ ಪತ್ರಿಕಾ ಗೋಷ್ಟಿಯ ಮೂಲಕ ರಾಜ್ಯ ಸರ್ಕಾರಕ್ಕೆ ಅಗ್ರಹಪೂರಕವಾಗಿ ವಿನಂತಿಸುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ. ಸಿ, ಪ್ರಧಾನ ಕಾರ್ಯದರ್ಶಿ ಪಿ.ಎ.ವೆಂಕಟೇಶ್, ಖಜಾಂಚಿಮೋಹನ್ ಬಾಬು ಹೆಚ್.ಎಸ್, ಜಿಲ್ಲಾ ಉಪಾಧ್ಯಕ್ಷರಾದ ಎಲ್.ಆರ್.ನಳಿನಾಕ್ಷಿ, ವೀರಣ್ಣ, ಶಂಬಣ್ಣ, ವಿಷಕಂಠ, ಮಂಜುನಾಥ್, ಕಾರ್ಯದರ್ಶಿಗಳಾದ ಎಲ್.ಸಿ.ಸುಮಾ, ವೈ.ಎಸ್.ಮಧು, ವಿಶ್ವಾನಾಥ್ ಅಬ್ಬಿಗೆರೆ, ಅನಿಲ್ ಗುಪ್ತಾ, ಪಿ.ಕೆ.ವೆಂಕಟೇಶ್ ಉಪಸ್ಥಿತರಿದ್ದರು.




