ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿಗೆ 15 ದಿನಗಳ ಕಾಲ ದಿನಂಪ್ರತಿ 3,500 ಕ್ಯೂಸೆಕ್ ನೀರು (ಒಟ್ಟು 4 ಟಿಎಂಸಿ) ಬಿಡುಗಡೆ ಮಾಡಲು ಆದೇಶಿಸಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶುಕ್ರವಾರ ಉನ್ನತ ಮಟ್ಟದ ಸಭೆ ನಡೆಸಿದರು.
ರಾಜ್ಯದ ಮುಂದಿನ ಕಾನೂನು ಹಾಗೂ ರಾಜಕೀಯ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲು ಆಗಸ್ಟ್ 2ರ ಭಾನುವಾರದಂದು ಮುಖ್ಯಮಂತ್ರಿಯವರ ಅಧಿಕೃತ ನಿವಾಸ 'ಕೃಷ್ಣಾ'ದಲ್ಲಿ ಮಹತ್ವದ ಸರ್ವಪಕ್ಷ ಸಭೆ ಕರೆಯಲಾಗಿದೆ.
ಆಗಸ್ಟ್ 2ಕ್ಕೆ ಸರ್ವಪಕ್ಷ ಸಭೆ:
ಕಾವೇರಿ ವಿಚಾರದಲ್ಲಿ ರಾಜ್ಯದ ಹಿತ ಕಾಯಲು ಮಾಜಿ ಮುಖ್ಯಮಂತ್ರಿಗಳು, ಸಂಸದರು ಹಾಗೂ ಕಾವೇರಿ ಜಲಾನಯನ ಪ್ರದೇಶದ ಶಾಸಕರೊಂದಿಗೆ ಸರ್ಕಾರ ಚರ್ಚಿಸಲಿದೆ. "ರಾಜಕೀಯ ಭಿನ್ನಾಭಿಪ್ರಾಯ ಏನೇ ಇದ್ದರೂ ನಾಡಿನ ಹಿತಾಸಕ್ತಿಗೆ ಎಲ್ಲರೂ ಕೈಜೋಡಿಸಲಿದ್ದಾರೆ," ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.
ತಮಿಳುನಾಡು ಸಿಎಂ ಭೇಟಿ ತಾತ್ಕಾಲಿಕ ಮುಂದೂಡಿಕೆ:
ಆಗಸ್ಟ್ 3ರಂದು ನಿಗದಿಯಾಗಿದ್ದ ತಮಿಳುನಾಡು ಮುಖ್ಯಮಂತ್ರಿಯವರ ಬೆಂಗಳೂರು ಭೇಟಿಯನ್ನು ಮುಂದೂಡುವಂತೆ ಮನವಿ ಮಾಡಲಾಗಿದೆ. ಪ್ರಸ್ತುತ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯಲ್ಲಿ ಸಭೆ ನಡೆಸುವುದು ಸೂಕ್ತವಲ್ಲ. ವಾತಾವರಣ ಶಾಂತವಾದ ಬಳಿಕ ಸೌಹಾರ್ದಯುತವಾಗಿ ಚರ್ಚಿಸೋಣ ಎಂದು ತಿಳಿಸಲಾಗಿದೆ.
"ಹೆಚ್ಚಿನ ನೀರು ಹರಿಸಿಲ್ಲ":
"ತಮಿಳುನಾಡಿಗೆ ನಾವು ಯಾವುದೇ ಹೆಚ್ಚಿನ ನೀರು ಹರಿಸುತ್ತಿಲ್ಲ, ಜಲಾಶಯಗಳಿಂದ ಸಹಜವಾಗಿ ಹರಿದುಹೋಗುವ ನೀರು ಮಾತ್ರ ತಲುಪುತ್ತಿದೆ. ಸಮಸ್ಯೆಗೆ ಮಳೆರಾಯನ ಕೃಪೆಯೇ ಅಂತಿಮ ಪರಿಹಾರ," ಎಂದು ಸಿಎಂ ಸ್ಪಷ್ಟಪಡಿಸಿದರು.
ಮೇಕೆದಾಟುವಿನಿಂದ ತಮಿಳುನಾಡಿಗೆ ಲಾಭ:
ಮೇಕೆದಾಟು ಜಲಾಶಯ ಯೋಜನೆಯಿಂದ ಕರ್ನಾಟಕಕ್ಕೆ ವಿದ್ಯುತ್ ಉತ್ಪಾದನೆ ಬಿಟ್ಟರೆ ಉಳಿದಂತೆ ಹೆಚ್ಚಿನ ಪ್ರಯೋಜನ ತಮಿಳುನಾಡಿಗೇ ಆಗಲಿದೆ. ಸರ್ಕಾರ ಸುಪ್ರೀಂ ಕೋರ್ಟ್ ಆದೇಶಕ್ಕೆ ಬದ್ಧವಾಗಿ ಕಾನೂನು ವ್ಯಾಪ್ತಿಯಲ್ಲೇ ಹೆಜ್ಜೆ ಇಡಲಿದೆ ಎಂದು ಹೇಳಿದರು.
ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಿದವರು:
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಈ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಡಿಜಿಪಿ ಸಲೀಂ ಅಹ್ಮದ್ ಸೇರಿದಂತೆ ನೀರಾವರಿ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.



