ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ರೈತರಿಗೆ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಮರ್ಪಕವಾಗಿ ಪೂರೈಕೆಯಾಗುವುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ನಡೆದ ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಮೀನುಗಾರಿಕೆ ಇಲಾಖೆಗಳ ಜಂಟಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅತಿವೃಷ್ಟಿ ಹಾಗೂ ಅನಾವೃಷ್ಟಿಯಂತಹ ಪ್ರಕೃತಿ ವೈಪರೀತ್ಯಗಳನ್ನು ಎದುರಿಸಲು ಇಲಾಖೆಗಳು ಸನ್ನದ್ಧವಾಗಿರಬೇಕು ಮತ್ತು ಬರ ಪರಿಸ್ಥಿತಿ ಎದುರಿಸಲು ತುರ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.
ಕೃಷಿ ಹೊಂಡಗಳಿಗೆ ಬೇಲಿ: ರಾಜ್ಯದಲ್ಲಿ ಕೃಷಿ ಹೊಂಡಗಳಿಗೆ ಬಿದ್ದು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಸಿಎಂ, ಹೊಂಡಗಳಿಗೆ ಕಡ್ಡಾಯವಾಗಿ ಬೇಲಿ ನಿರ್ಮಿಸಲು ಯೋಜನೆ ರೂಪಿಸಬೇಕು ಎಂದರು. ಇದಕ್ಕಾಗಿ ಹಣಕಾಸಿನ ನೆರವು ನೀಡುವ ಬಗ್ಗೆ ಹಾಗೂ ಇತರ ರಾಜ್ಯಗಳ ಮಾದರಿಗಳನ್ನು ಅಧ್ಯಯನ ಮಾಡಿ ವರದಿ ನೀಡುವಂತೆ ಸೂಚಿಸಿದರು.
ಆಧುನಿಕ ತಂತ್ರಜ್ಞಾನದ ಬಳಕೆ: ಕೃಷಿ ವಲಯದಲ್ಲಿ ಡ್ರೋನ್ ಹಾಗೂ ಕೃತಕ ಬುದ್ಧಿಮತ್ತೆ ಸೇರಿದಂತೆ ಆಧುನಿಕ ತಂತ್ರಜ್ಞಾನಗಳನ್ನು ಸಾಮಾನ್ಯ ರೈತರಿಗೂ ತಲುಪಿಸುವ ವ್ಯವಸ್ಥೆಯಾಗಬೇಕು. ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಖಾಲಿ ಇರುವ ಇಲಾಖೆಯ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು.
ಸಬ್ಸಿಡಿಗಳ ಆಡಿಟ್ ಮತ್ತು ವರದಿ: ರೈತರಿಗೆ ನೀಡಲಾಗುತ್ತಿರುವ ಸಬ್ಸಿಡಿಗಳು ನಿಜಕ್ಕೂ ಪ್ರಯೋಜನಕಾರಿಯಾಗುತ್ತಿವೆಯೇ? ಸಬ್ಸಿಡಿ ನೀಡಿದ ಉದ್ದೇಶ ಈಡೇರುತ್ತಿದೆಯೇ? ಎಂಬ ಬಗ್ಗೆ ಸಮಗ್ರ ವರದಿ ನೀಡಲು ಸೂಚಿಸಿದರು. ಇದರೊಂದಿಗೆ ಕೃಷಿ ಇಲಾಖೆ ಅಧೀನದ 5 ನಿಗಮ-ಮಂಡಳಿಗಳ ಸ್ಥಿತಿಗತಿ ಹಾಗೂ ರಾಜ್ಯದಲ್ಲಿರುವ ಕೋಲ್ಡ್ ಸ್ಟೋರೇಜ್ಮತ್ತು ಗೋದಾಮುಗಳ ಪಟ್ಟಿಯನ್ನು ಒಪ್ಪಿಸಲು ತಿಳಿಸಿದರು.
ರಫ್ತು ಉತ್ತೇಜನಕ್ಕೆ ಹೊಸ ಪ್ಲಾನ್: ಕೆಪೆಕ್ ಮೂಲಕ ಕೃಷಿ ಉತ್ಪನ್ನಗಳ ರಫ್ತು ಪ್ರಮಾಣವನ್ನು ಹೆಚ್ಚಿಸಲು ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್ ಹಾಗೂ ಎಸಿಎಸ್ ತುಷಾರ ಗಿರಿನಾಥ್ ಅವರಿಗೆ ಹೊಸ ಯೋಜನೆ ರೂಪಿಸಲು ಜವಾಬ್ದಾರಿ ವಹಿಸಲಾಯಿತು. ಕೇಂದ್ರ ಸರ್ಕಾರ ಪುರಸ್ಕೃತ ಯೋಜನೆಗಳ ಅನುದಾನ ಪಡೆಯಲು ಅಗತ್ಯ ಒತ್ತಡ ತರಲಾಗುವುದು ಎಂದು ಸಿಎಂ ಹೇಳಿದರು.
ಆಸ್ತಿಗಳ ರಕ್ಷಣೆ: ಕೃಷಿ ಮಾರುಕಟ್ಟೆ ಹಾಗೂ ಎಪಿಎಂಸಿಗಳಿಗೆ ಸೇರಿದ ಜಾಗಗಳು ಒತ್ತುವರಿಯಾಗದಂತೆ ಕಾಂಪೌಂಡ್ ನಿರ್ಮಿಸಿ ಸುರಕ್ಷಿತವಾಗಿಡಬೇಕು. ಎಪಿಎಂಸಿಗಳು ರೈತರ ಬಳಕೆಗೆ ಸಮರ್ಪಕವಾಗಿ ಸಿಗುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕಡಕ್ ಸೂಚನೆ ನೀಡಿದರು.
"ಪ್ರಾಥಮಿಕ ಕೃಷಿಯೊಂದಿಗೆ ಸೆಕೆಂಡರಿ ಕೃಷಿಗೂ (ಉಪಕಸುಬು) ಆದ್ಯತೆ ನೀಡಿ ರೈತರ ಆದಾಯ ಹೆಚ್ಚಿಸಲು ಈಗಾಗಲೇ ಸೂಚಿಸಿರುವ ಕ್ರಮಗಳನ್ನು ಅಧಿಕಾರಿಗಳು ತಳಮಟ್ಟದಲ್ಲಿ ಸಮರ್ಪಕವಾಗಿ ಜಾರಿಗೊಳಿಸಬೇಕು." ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ.
ಬೆಳೆ ಮಾದರಿ ಹಾಗೂ ಕೃಷಿ ಸಂಸ್ಕೃತಿಗೆ ತಕ್ಕಂತೆ ರೈತರಿಗೆ ಕ್ರಿಮಿನಾಶಕ ಮತ್ತು ಔಷಧ ಸಿಂಪರಣೆ ಸಲಕರಣೆಗಳ ನೆರವನ್ನು ಒದಗಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.




