ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ, ಇತ್ತ ಹೈಕಮಾಂಡ್ ಮಟ್ಟದಲ್ಲಿ ಸಚಿವ ಸಂಪುಟ ಕಸರತ್ತು ಗರಿಷ್ಠ ವೇಗವನ್ನು ಪಡೆದುಕೊಂಡಿದೆ. ಯಾರಿಗೆ ಮಂತ್ರಿ ಪಟ್ಟ ಸಿಗಲಿದೆ? ಯಾರಿಗೆ ಕೈ ತಪ್ಪಲಿದೆ? ಎಂಬ ಲೆಕ್ಕಾಚಾರಗಳು ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಲಾಬಿ ಬಿರುಸಿನಿಂದ ಸಾಗಿದೆ.
16 ಮಾಜಿ ಸಚಿವರಿಗೆ ಕೊಕ್? 13 ಮಂದಿಗೆ ಮತ್ತೆ ಮಂತ್ರಿ ಭಾಗ್ಯ!:
ಮೂಲಗಳ ಪ್ರಕಾರ, ಈ ಹಿಂದಿನ ಸಿದ್ದರಾಮಯ್ಯ ಸಂಪುಟದಲ್ಲಿದ್ದ ಒಟ್ಟು 16 ಮಾಜಿ ಸಚಿವರಿಗೆ ಈ ಬಾರಿ ಸಚಿವ ಸ್ಥಾನ ಸಿಗುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ. ಹೊಸ ಮುಖಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಹೈಕಮಾಂಡ್ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಆದರೆ, ಮಾಜಿ ಸಚಿವರ ಪೈಕಿ ಪ್ರಭಾವಿ ನಾಯಕರಾದ 13 ಮಂದಿ ಮತ್ತೆ ಸ್ಥಾನ ಪಡೆಯುವ ಬಲವಾದ ವಿಶ್ವಾಸದಲ್ಲಿದ್ದಾರೆ.
ನಿರೀಕ್ಷೆಯಲ್ಲಿರುವ ಪ್ರಮುಖ ನಾಯಕರ ಪಟ್ಟಿ ಹೀಗಿದೆ.
ಡಾ. ಜಿ. ಪರಮೇಶ್ವರ್, ಕೆ.ಹೆಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಹೆಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಪ್ರಿಯಾಂಕ ಖರ್ಗೆ, ದಿನೇಶ್ ಗುಂಡುರಾವ್, ಈಶ್ವರ್ ಖಂಡ್ರೆ, ಶಿವರಾಜ್ ತಂಗಡಗಿ, ಮಂಕಾಳ್ ವೈದ್ಯ ಮತ್ತು ಸಂತೋಷ್ ಲಾಡ್.
ನಾಲ್ಕು ಡಿಸಿಎಂ ಹುದ್ದೆ ಸೃಷ್ಟಿ? ಕೈ ನಾಯಕರಲ್ಲಿ ಶುರುವಾಯ್ತು ಬಿಗ್ ಫೈಟ್!: ಸಂಪುಟ ರಚನೆ ನಡುವೆಯೇ ರಾಜ್ಯ ರಾಜಕೀಯದಲ್ಲಿ ಮತ್ತೊಂದು ದೊಡ್ಡ ಬಾಂಬ್ ಸಿಡಿದಿದೆ. ಪ್ರಮುಖ ಸಮುದಾಯಗಳನ್ನು ಬ್ಯಾಲೆನ್ಸ್ ಮಾಡಲು ಹೈಕಮಾಂಡ್ ಮಟ್ಟದಲ್ಲಿ ನಾಲ್ಕು ಉಪಮುಖ್ಯಮಂತ್ರಿ ಸ್ಥಾನಗಳ ಸೃಷ್ಟಿಯ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ. ಈ ಸುದ್ದಿ ಹೊರಬೀಳುತ್ತಿದ್ದಂತೆ, ಡಿಸಿಎಂ ಗಾದಿ ಹಿಡಿಯಲು ಹಿರಿಯ ನಾಯಕರ ನಡುವೆ ಭೀಕರ ಪೈಪೋಟಿ ಆರಂಭವಾಗಿದೆ.
ಟ್ವಿಸ್ಟ್ ಕೊಟ್ಟ ಭೋಜನ ರಾಜಕೀಯ:
ತಮ್ಮ ತಮ್ಮ ಸಮುದಾಯದ ಶಾಸಕರ ಬೆಂಬಲ ಕ್ರೋಢೀಕರಿಸಲು ನಾಯಕರು ಈಗ ಮಾಸ್ಟರ್ ಪ್ಲಾನ್ ರೂಪಿಸುತ್ತಿದ್ದಾರೆ. ಲಿಂಗಾಯತ ಕೋಟಾದಡಿ ಡಿಸಿಎಂ ಸ್ಥಾನ ಗಿಟ್ಟಿಸಿಕೊಳ್ಳಲು ಈಶ್ವರ್ ಖಂಡ್ರೆ ಅವರು ಲಿಂಗಾಯತ ಶಾಸಕರಿಗಾಗಿ ಹೈ-ಪ್ರೊಫೈಲ್ ಭೋಜನಕೂಟ ಆಯೋಜಿಸಿ, ತಮ್ಮ ಪರವಾಗಿ ಬ್ಯಾಟಿಂಗ್ ಮಾಡುವಂತೆ ಬೆಂಬಲ ಕೋರಿದ್ದಾರೆ. ಇತ್ತ, ಮತ್ತೊಬ್ಬ ಪ್ರಭಾವಿ ನಾಯಕ ಎಂ.ಬಿ. ಪಾಟೀಲ್ ಕೂಡ ಕಡಿಮೆ ಇಲ್ಲ ಎಂಬಂತೆ ಲಿಂಗಾಯತ ಶಾಸಕರನ್ನು ವೈಯಕ್ತಿಕವಾಗಿ ಸಂಪರ್ಕಿಸಿ ತಮ್ಮ ಪರವಾಗಿ ಭರ್ಜರಿ ಲಾಬಿ ನಡೆಸುತ್ತಿದ್ದಾರೆ.
ಒಟ್ಟಾರೆಯಾಗಿ, ನೂತನ ಸಿಎಂ ಆಯ್ಕೆಯ ಬೆನ್ನಲ್ಲೇ ಸಚಿವ ಸಂಪುಟದ ಈ ಹಗ್ಗಜಗ್ಗಾಟ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎಂಬುದನ್ನು ಕಾದು ನೋಡಬೇಕಿದೆ.



