ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಮತ್ತೊಮ್ಮೆ ತೀವ್ರವಾಗಿ ಸಿಡಿದೆದ್ದಿದೆ. ಕಳೆದ ನಾಲ್ಕು ವರ್ಷಗಳಿಂದ ಬಿಲ್ ಪಾವತಿಯಾಗದೆ ರಾಜ್ಯದ 1.5 ಲಕ್ಷ ಗುತ್ತಿಗೆದಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ.
ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿವಿಧ 8 ಇಲಾಖೆಗಳಲ್ಲಿ ಸುಮಾರು 38 ಸಾವಿರ ಕೋಟಿ ರೂಪಾಯಿ ಹಣ ಬಾಕಿ ಉಳಿದಿದೆ ಎಂದು ತಿಳಿಸಿದ್ದು, ಬಾಕಿ ಬಿಲ್ ಪಾವತಿಗೆ ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. ಒಂದು ವೇಳೆ ನವೆಂಬರ್ ಒಳಗೆ ಬಾಕಿ ಹಣ ಬಿಡುಗಡೆ ಮಾಡದಿದ್ದರೆ, ಕಮಿಷನ್ ದಂಧೆಗೆ ಸಂಬಂಧಿಸಿದ ಸ್ಫೋಟಕ ದಾಖಲೆಗಳನ್ನು ಬಹಿರಂಗಪಡಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಶೇ.70ರಷ್ಟು ಶಾಸಕರಿಂದ ಕಮಿಷನ್ ಕಾಟ: ಸ್ಫೋಟಕ ಹೇಳಿಕೆ
ಈ ಕಾಂಗ್ರೆಸ್ ಸರ್ಕಾರದಲ್ಲಿ ಹಿಂದಿನ ಸರ್ಕಾರಕ್ಕಿಂತಲೂ ಕಮಿಷನ್ ಹಾವಳಿ ಹೆಚ್ಚಾಗಿದೆ ಎಂದು ಕಿಡಿಕಾಡಿದ ಆರ್. ಮಂಜುನಾಥ್, ಅದು ಎಷ್ಟು ಪರ್ಸೆಂಟೇಜ್ ಎಂದು ಕೇಳಬೇಡಿ ಎಂದರು.
ಮುಂದುವರಿದು ಮಾತನಾಡುತ್ತಾ, ಪ್ರಸ್ತುತ ಶೇ. 70ರಷ್ಟು ಶಾಸಕರು ಪ್ರತಿಯೊಂದು ಕಾಮಗಾರಿಯಲ್ಲೂ ಮೂಗು ತೂರಿಸುತ್ತಿದ್ದಾರೆ. ಟೆಂಡರ್ ಮಂಜೂರಾದ ತಕ್ಷಣ ಶಾಸಕರ ಬಳಿ ಹೋಗಬೇಕು, ಪೇಮೆಂಟ್ ಆದ ತಕ್ಷಣ ಅವರಿಗೆ ಪಾಲು ತಲುಪಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಅವರು ದೂರಿದರು.
ಮಧ್ಯವರ್ತಿಗಳ ಹಾವಳಿ: ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ಮೂಲಕ ಕಮಿಷನ್‌ಗಾಗಿ ಗುತ್ತಿಗೆದಾರರನ್ನು ಪೀಡಿಸಲಾಗುತ್ತಿದೆ. ಈ ವಿಚಾರ ಮುಖ್ಯಮಂತ್ರಿಗಳಿಗೂ ತಿಳಿದಿದೆ ಎಂದು ದೂರಿದರು.
ಸಚಿವರ ವಿರುದ್ಧವೂ ಆರೋಪ: ಸಚಿವರಿಗೂ ಕಮಿಷನ್ ಹೋಗುತ್ತಿದೆ. ಹೊಸ ಸಚಿವರಿಗೆ ಪೇಮೆಂಟ್ ಇನ್ನೂ ತಲುಪಿಲ್ಲ. ಸಚಿವ ಸತೀಶ್ ಜಾರಕಿಹೊಳಿ ಅವರ ಇಲಾಖೆ ಹಾಗೂ ಬಿಬಿಎಂಪಿ ಹೊರತುಪಡಿಸಿ, ಉಳಿದೆಲ್ಲಾ ಇಲಾಖೆಗಳಲ್ಲಿ ಕಮಿಷನ್ ವಹಿವಾಟು ಎಗ್ಗಿಲ್ಲದೆ ಸಾಗಿದೆ ಎಂದು ಮಂಜುನಾಥ್ ಆರೋಪಿಸಿದರು.
ಸಿಎಂಗೆ ಬರೆದ ಪತ್ರದ ಪ್ರಮುಖಾಂಶಗಳು ಹಾಗೂ ಇಲಾಖಾವಾರು ಬಾಕಿ ವಿವರ:
ಸೆಪ್ಟೆಂಬರ್ 30, 2026ರಂದು ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಮತ್ತು ಪ್ರಧಾನ ಕಾರ್ಯದರ್ಶಿ ಜೆ.ಎಂ. ನಂದಕುಮಾರ್ ಅವರು ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ಗುತ್ತಿಗೆದಾರರ ಅಳಲನ್ನು ತೋಡಿಕೊಳ್ಳಲಾಗಿದೆ.
ಹಬ್ಬಗಳಲ್ಲೂ ಸಿಗದ ಮುಂಗಡ: ಸಾಮಾನ್ಯವಾಗಿ ಸರ್ಕಾರಗಳು ಗೌರಿ-ಗಣೇಶ, ದಸರಾ ಮತ್ತು ದೀಪಾವಳಿ ಸಮಯದಲ್ಲಿ ಬಾಕಿ ಹಣ ಅಥವಾ ಮುಂಗಡ ಬಿಡುಗಡೆ ಮಾಡುತ್ತವೆ. ಆದರೆ ಈ ಸರ್ಕಾರ ಇಲ್ಲಿಯವರೆಗೆ ಯಾವುದೇ ಹಬ್ಬದ ಮುಂಗಡವನ್ನೂ ಬಿಡುಗಡೆ ಮಾಡಿಲ್ಲ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ.
ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಒಟ್ಟು ಮೊತ್ತದ ವಿವರ:
ಜಲಸಂಪನ್ಮೂಲ ಇಲಾಖೆ: ₹14,000 ಕೋಟಿ, ಲೋಕೋಪಯೋಗಿ ಇಲಾಖೆ (PWD): ₹8,370 ಕೋಟಿ, ಆರ್‌ಡಿಪಿಆರ್ (RDPR): ₹3,000 ಕೋಟಿ, ಸಣ್ಣ ನೀರಾವರಿ ಇಲಾಖೆ: ₹3,600 ಕೋಟಿ, ನಗರಾಭಿವೃದ್ಧಿ ಇಲಾಖೆ: ₹1,800 ಕೋಟಿ, ವ್ಯವಸ್ಥೆ ಮತ್ತು ತ್ಯಾಜ್ಯ ನಿರ್ವಹಣೆ: ₹2,600 ಕೋಟಿ, ಕಾರ್ಮಿಕ ಇಲಾಖೆ: ₹2,000 ಕೋಟಿ, ಬಿಬಿಎಂಪಿ (BBMP): ₹2,600 ಕೋಟಿ ಒಟ್ಟು ಬಾಕಿ ಮೊತ್ತ: ₹37,980 ಕೋಟಿ ಬರಬೇಕಿದೆ ಎಂದು ಅವರು ಮಾಹಿತಿ ನೀಡಿದರು.
ಸಕಾಲದಲ್ಲಿ ಕೆಲಸ ಪೂರ್ಣಗೊಳಿಸಿದರೂ ಕಳೆದ 3-4 ವರ್ಷಗಳಿಂದ ಬಿಲ್ ಸಿಗದೆ ಗುತ್ತಿಗೆದಾರರು ಸರ್ಕಾರದ ಕಚೇರಿಗಳಲ್ಲಿ ಅಲೆಯುತ್ತಿದ್ದು, ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಬಾಕಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ಸಂಘ ಆಗ್ರಹಿಸಿದೆ.




