ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಕಾಂಗ್ರೆಸ್ ಸರ್ಕಾರದ ಅವೈಜ್ಞಾನಿಕ ಆಡಳಿತ, ಅನುದಾನ ಬಿಡುಗಡೆಯಲ್ಲಿ ವಿಳಂಬ ಮತ್ತು ಕಮಿಷನ್ ದಂಧೆಯಿಂದಾಗಿ ಪ್ರಾಮಾಣಿಕ ಅಧಿಕಾರಿಗಳು ನಿರಂತರವಾಗಿ ಸಂಕಟ ಅನುಭವಿಸುವಂತಾಗಿದೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗದಗದ ಕೆಆರ್‌ಐಡಿಎಲ್ ಸಹಾಯಕ ಕಾರ್ಯಪಾಲಕ ಅಭಿಯಂತರ ಫರ್ವೇಜ್ ಅವರು ಸರ್ಕಾರದಿಂದ ಅನುದಾನ ಬಿಡುಗಡೆಯಾಗದೆ, ಗುತ್ತಿಗೆದಾರರ ಒತ್ತಡ ತಾಳಲಾರದೆ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿರುವ ಘಟನೆ ಅತ್ಯಂತ ಆತಂಕಕಾರಿಯಾಗಿದೆ. ಕಾಮಗಾರಿಗಳು ಪೂರ್ಣಗೊಂಡರೂ ಅನುದಾನ ಬಿಡುಗಡೆ ಮಾಡದಿರುವುದರಿಂದ ಇಂದು ಅಧಿಕಾರಿಗಳು ತೀವ್ರ ಮಾನಸಿಕ ಸವಾಲು ಎದುರಿಸುತ್ತಿದ್ದಾರೆ.
ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಹಣ ನೀಡದೆ ತಡೆಹಿಡಿಯಲಾಗಿದ್ದು, ಸರ್ಕಾರದ ಹಣವೆಲ್ಲ ಕೇವಲ ಜಾಹೀರಾತು ಮತ್ತು ಗ್ಯಾರಂಟಿಗಳ ಹೆಸರಿನಲ್ಲೇ ದುರ್ಬಳಕೆಯಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಸರ್ಕಾರ ತನ್ನ ಆಡಳಿತ ವೈಫಲ್ಯಕ್ಕೆ ಅಧಿಕಾರಿಗಳನ್ನು ಬಲಿ ಕೊಡಬಾರದು ಎಂದಿರುವ ಸಿ.ಟಿ. ರವಿ, ತಕ್ಷಣವೇ ನಾಪತ್ತೆಯಾಗಿರುವ ಅಧಿಕಾರಿಯನ್ನು ಸುರಕ್ಷಿತವಾಗಿ ಪತ್ತೆಹಚ್ಚಬೇಕು ಹಾಗೂ ಬಾಕಿ ಇರುವ ಅನುದಾನವನ್ನು ತಕ್ಷಣವೇ ಬಿಡುಗಡೆಗೊಳಿಸಿ ಆಡಳಿತ ಯಂತ್ರವನ್ನು ಚುರುಕುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.




