ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪದೇ ಪದೇ ಸುಳ್ಳು ಹೇಳುವ ಮೂಲಕ ಸುಳ್ಳನ್ನೇ ಸತ್ಯ ಮಾಡಲು ಕಾಂಗ್ರೆಸ್ ಮತ್ತು I.N.D.I ಒಕ್ಕೂಟ ಯತ್ನಿಸುತ್ತಿದ್ದು, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿಚಾರದಲ್ಲಿ ಅಪಪ್ರಚಾರ ನಡೆಸುವ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಪ್ರಶ್ನಿಸಲು ಹೊರಟಿದೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ಸಿನ ದುರ್ವರ್ತನೆ ಹಾಗೂ ಗೊಂದಲಕಾರಿ ಹೇಳಿಕೆಗಳ ವಿರುದ್ಧ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಇರಾದೆ ಹಾಗೂ ದ್ವಿಮುಖ ನೀತಿಯನ್ನು ಕಟುವಾಗಿ ವಿಮರ್ಶಿಸಿದರು.
1950ರಿಂದಲೂ ನಡೆಯುತ್ತಿರುವ ಸಹಜ ಪ್ರಕ್ರಿಯೆ: ಮತದಾರರ ಪಟ್ಟಿ ಪರಿಷ್ಕರಣೆ ಎಂಬುದು ಹೊಸದೇನೂ ಅಲ್ಲ. 1950 ರಿಂದಲೂ ಭಾರತೀಯ ಚುನಾವಣಾ ಆಯೋಗವು ಈ ಕಾರ್ಯವನ್ನು ಸತತವಾಗಿ ನಡೆಸಿಕೊಂಡು ಬಂದಿದೆ. ಗ್ರಾಮ ಮಟ್ಟದಿಂದ ದೇಶದ ಹಂತದವರೆಗೆ ಸೂಕ್ತ ಜವಾಬ್ದಾರಿಗಳನ್ನು ನೀಡಿ, ಅತ್ಯಂತ ಪಾರದರ್ಶಕವಾಗಿ ಆಯೋಗವು ಕಾರ್ಯನಿರ್ವಹಿಸುತ್ತಿದೆ.
ರಾಜಕೀಯ ಪಕ್ಷಗಳಿಗೆ ಅವಕಾಶ: ಇತಿಹಾಸದಲ್ಲೇ ಮೊದಲ ಬಾರಿಗೆ ನೋಂದಾಯಿತ ರಾಜಕೀಯ ಪಕ್ಷಗಳಿಗೆ ಬಿಎಲ್‌ಎ-1 ಹಾಗೂ ಬಿಎಲ್‌ಎ-2 ಪ್ರತಿನಿಧಿಗಳನ್ನು ನಿಯೋಜಿಸಲು ಅವಕಾಶ ಮಾಡಿಕೊಡಲಾಗಿದೆ. ಹೀಗಿದ್ದರೂ ಕಾಂಗ್ರೆಸ್ ಸುಖಾಸುಮ್ಮನೆ ವ್ಯವಸ್ಥೆಯ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದೆ.
ಕಾಂಗ್ರೆಸ್ಸಿನ ದ್ವಿಮುಖ ನೀತಿ: ಕೇರಳದಲ್ಲಿ ಅಲ್ಲಿನ ಕಾಂಗ್ರೆಸ್ ಘಟಕವು ಎಸ್‌ಐಆರ್ ಪ್ರಕ್ರಿಯೆಯನ್ನು ಬೆಂಬಲಿಸುತ್ತದೆ. ಆದರೆ, ಚುನಾವಣೆಯಲ್ಲಿ ಸೋಲುವ ರಾಜ್ಯಗಳಲ್ಲಿ ಅದೇ ಎಸ್‌ಐಆರ್ ಅನ್ನು ಪ್ರಶ್ನಿಸುವ ಹೀನಾಯ ಮನಸ್ಥಿತಿಗೆ ಕಾಂಗ್ರೆಸ್ ಇಳಿದಿದೆ ಎಂದು ಸಿ.ಟಿ. ರವಿ ವ್ಯಂಗ್ಯವಾಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಎಸ್‌ಐಆರ್ ರಾಜ್ಯ ಸಂಚಾಲಕ ದತ್ತಾತ್ರಿ, ರಾಜ್ಯ ವಕ್ತಾರ ಎಚ್. ವೆಂಕಟೇಶ್ ದೊಡ್ಡೇರಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು.




