ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ವೇದಾವತಿ ಸೇತುವೆಯ ಎರಡು ಕಡೆಗಳ ಕೊನೆಯ ಅಂಚಿನಲ್ಲಿ ಕೂಡಲೇ ರಕ್ಷಣಾ ತಡೆಗೋಡೆ ನಿರ್ಮಾಣ ಮಾಡುವಂತೆ ಸಾರ್ವಜನಿಕರಿಂದ ತೀವ್ರ ಒತ್ತಾಯ ಕೇಳಿಬಂದಿದೆ.
ಸೇತುವೆಯ ಇಕ್ಕೆಲಗಳ ಕೊನೆಯ ಭಾಗದಲ್ಲಿ ಅಂಚುಗಳು ತೆರೆದುಕೊಂಡಿದ್ದು, ಯಾವುದೇ ಸುರಕ್ಷತಾ ಗೋಡೆಗಳಿಲ್ಲದಿರುವುದು ಸಾರ್ವಜನಿಕರಲ್ಲಿ ಮತ್ತು ವಾಹನ ಸವಾರರಲ್ಲಿ ತೀವ್ರ ಭೀತಿ ಹಾಗೂ ಆತಂಕಕ್ಕೆ ಕಾರಣವಾಗಿದೆ.
ಮುಂದಾಗುವ ಅನಾಹುತಗಳನ್ನು ತಪ್ಪಿಸಿ:
ದಿನನಿತ್ಯ ಈ ಮಾರ್ಗವಾಗಿ ನೂರಾರು ಬೈಕ್ ಸವಾರರು, ಶಾಲಾ ಮಕ್ಕಳು ಮತ್ತು ಹಿರಿಯ ನಾಗರಿಕರು ಸಂಚರಿಸುತ್ತಾರೆ. ಅಪ್ಪಿ ತಪ್ಪಿ ಸವಾರರ ನಿಯಂತ್ರಣ ತಪ್ಪಿದರೂ ಅಥವಾ ನಡೆದಾಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ, ನೇರವಾಗಿ ಕೆಳಗೆ ತಗ್ಗಿಗೆ ಬಿದ್ದು ಪ್ರಾಣಾಪಾಯ ಸಂಭವಿಸುವ ಗಂಭೀರ ಅಪಾಯವಿದೆ. ಇಂತಹ ಯಾವುದೇ ಅನಾಹುತಗಳು ಸಂಭವಿಸುವ ಮುನ್ನವೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ತುರ್ತಾಗಿ ಕ್ರಮ ಕೈಗೊಳ್ಳಬೇಕಿದೆ.
ಸಾರ್ವಜನಿಕರ ಪ್ರಮುಖ ಬೇಡಿಕೆಗಳು: 100 ಮೀಟರ್ ಉದ್ದದ ತಡೆಗೋಡೆ: ವೇದಾವತಿ ಸೇತುವೆಯ ಕೊನೆಯ ಅಂಚಿನ ಭಾಗದಲ್ಲಿ ಕನಿಷ್ಠ 100 ಮೀಟರ್ ಉದ್ದದಷ್ಟು ಗಟ್ಟಿಯಾದ ತಡೆಗೋಡೆಯನ್ನು ನಿರ್ಮಿಸಬೇಕು.
ಪ್ರಾಣಭಯ ಮುಕ್ತ ಸಂಚಾರ: ಯಾವುದೇ ಭಯ ಭೀತಿ ಇಲ್ಲದೆ, ನೆಮ್ಮದಿಯಿಂದ ಓಡಾಡಲು ಸುರಕ್ಷಿತ ವಾತಾವರಣ ಕಲ್ಪಿಸಬೇಕು.
ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡುವ ಮುನ್ನ, ಸಂಬಂಧಪಟ್ಟ ಇಲಾಖೆಯು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಕೂಡಲೇ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಬೇಕು ಎಂದು ಹಿರಿಯೂರು ನಗರದ ನಾಗರಿಕರು ಬಲವಾಗಿ ಆಗ್ರಹಿಸಿದ್ದಾರೆ.




