ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸ್ಥಳೀಯ ರೈತರು, ಕೃಷಿ ಕಾರ್ಮಿಕರು ಮತ್ತು ಸಹಕಾರಿಗಳ ಅನುಕೂಲಕ್ಕಾಗಿ ಹಿರಿಯೂರು ನಗರದಲ್ಲಿ ಸುಮಾರು 97 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ವಿಶಾಲವಾದ ಹಾಗೂ ಸುಸಜ್ಜಿತವಾದ ಡಿಸಿಸಿ ಬ್ಯಾಂಕ್‌ನ ನೂತನ ಶಾಖಾ ಕಟ್ಟಡವನ್ನು ಮುಂದಿನ 9 ತಿಂಗಳಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಚಳ್ಳಕೆರೆ ಶಾಸಕರಾದ ಟಿ. ರಘುಮೂರ್ತಿ ತಿಳಿಸಿದರು.
ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಸಮೀಪವಿರುವ ಟಿ.ಎ.ಪಿ.ಸಿ.ಎಂ.ಎಸ್ ಜಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಿಸಿಸಿ ಬ್ಯಾಂಕ್ ಶಾಖೆಯ ನೂತನ ಕಟ್ಟಡದ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗುಣಮಟ್ಟದ ಕಾಮಗಾರಿಗೆ ಕಟ್ಟುನಿಟ್ಟಿನ ಸೂಚನೆ:
ಕಟ್ಟಡ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಗುತ್ತಿಗೆದಾರರು ಕಾಮಗಾರಿಯಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದು. ಸಂಪೂರ್ಣ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಮತ್ತು ಯಾವುದೇ ಕಳಪೆ ಕಾಮಗಾರಿಗೆ ಆಸ್ಪದ ನೀಡದಂತೆ ನಿಗದಿತ ಅವಧಿಯಲ್ಲಿ ಸುಸಜ್ಜಿತ ಕಟ್ಟಡವನ್ನು ಪೂರ್ಣಗೊಳಿಸಬೇಕು ಎಂದು ಶಾಸಕ ರಘುಮೂರ್ತಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಆಧುನೀಕರಣದೊಂದಿಗೆ ಹೆಚ್ಚಿನ ಸಾಲ ಸೌಲಭ್ಯ:
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರಾದ ಇಲ್ಯಾಸ್ ವುಲ್ಲಾ ಶರೀಫ್ ಅವರು "ಡಿಸಿಸಿ ಬ್ಯಾಂಕ್ ತನ್ನದೇ ಆದ ಸುದೀರ್ಘ ಇತಿಹಾಸವನ್ನು ಹೊಂದಿದೆ. ತಾಲೂಕಿನ ರೈತರು, ಕೃಷಿ ಕಾರ್ಮಿಕರು, ಹಾಲು ಉತ್ಪಾದಕರು ಹಾಗೂ ಸಹಕಾರ ಸಂಘಗಳ ಅಭಿವೃದ್ಧಿಗಾಗಿ ಈ ಬ್ಯಾಂಕ್ ನಿರಂತರವಾಗಿ ಶ್ರಮಿಸುತ್ತಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಆಧುನೀಕರಣಗೊಳ್ಳಲಿರುವ ಈ ನೂತನ ಶಾಖೆಯ ಮೂಲಕ ತಾಲೂಕಿನ ರೈತರಿಗೆ ಮತ್ತು ಸಹಕಾರ ಸಂಘಗಳಿಗೆ ಮತ್ತಷ್ಟು ಹೆಚ್ಚಿನ ಸಾಲಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು."

ಈ ಸಂದರ್ಭದಲ್ಲಿ ಸಹಕಾರ ವಲಯದ ಪ್ರಮುಖರು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು. ಡಿಸಿಸಿ ಬ್ಯಾಂಕ್ ಪದಾಧಿಕಾರಿಗಳಾದ ಉಪಾಧ್ಯಕ್ಷ ಮಂಜುನಾಥ್, ನಿರ್ದೇಶಕರುಗಳಾದ ಗಿರೀಶ್ ಹೊಳಲ್ಕೆರೆ, ನಿಶಾನಿ ಜಯಣ್ಣ, ಜಗನ್ನಾಥ್, ಮಂಜುನಾಥ್ ಮಾಳಿಗೆ, ಮಹಂತೇಶ್, ರಘುರಾಂರೆಡ್ಡಿ ಹಾಗೂ ವಿನೋದಮ್ಮ, ಟಿಎಪಿಸಿಎಂಎಸ್ ಅಧ್ಯಕ್ಷ ಶ್ರವಣಗೆರೆ ಹನುಮಂತರಾಯಪ್ಪ, ರೈತ ಮುಖಂಡರುಗಳಾದ ರಮೇಶ್, ಆಲೂರು ಸಿದ್ಧರಾಮಣ್ಣ, ಎಚ್.ಆರ್. ತಿಮ್ಮಯ್ಯ ಸೇರಿದಂತೆ ಮತ್ತಿತರರು ಇದ್ದರು.



