ಚಂದ್ರವಳ್ಳಿ ನ್ಯೂಸ್, ಸಾಗರ (ಮಧ್ಯಪ್ರದೇಶ):
ಕೇವಲ ಕಿಕ್ ನೀಡುತ್ತದೆ ಎಂಬ ಒಂದೇ ಕಾರಣಕ್ಕೆ ಗುಣಮಟ್ಟ ಗಮನಿಸದೇ ಮದ್ಯ ಸೇವಿಸಿದ ಗ್ರಾಮಸ್ಥರು ಪ್ರಾಣವನ್ನೇ ಕಳೆದುಕೊಂಡ ಭೀಕರ ಘಟನೆಯೊಂದು ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ಸಂಭವಿಸಿದೆ. ಕಲ್ತಂದಿ (ನಕಲಿ) ಮದ್ಯ ಸೇವಿಸಿ ಕನಿಷ್ಠ 12 ಜನರು ಮೃತಪಟ್ಟಿದ್ದು, ಹತ್ತಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಏನಿದು ಭೀಕರ ದುರಂತ?:
ಸಾಗರ ಜಿಲ್ಲಾ ಕೇಂದ್ರದಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಬಂದಾ ತಾಲೂಕಿನ ಬರಾಜ್, ಘೂಘರ್, ನಾವ್ರಾಜ್ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶನಿವಾರ ರಾತ್ರಿ ಈ ದುರಂತ ಸಂಭವಿಸಿದೆ. ರಾತ್ರಿ ಮದ್ಯ ಸೇವಿಸಿ ಮಲಗಿದ್ದ ಗ್ರಾಮಸ್ಥರಿಗೆ ಭಾನುವಾರ ಮುಂಜಾನೆ ವೇಳೆಗೆ ತೀವ್ರ ತಲೆನೋವು, ವಾಂತಿ ಹಾಗೂ ದೃಷ್ಟಿ ಮಂದವಾಗುವಂತಹ ಗಂಭೀರ ಲಕ್ಷಣಗಳು ಕಾಣಿಸಿಕೊಂಡವು. ತಕ್ಷಣವೇ ಕುಟುಂಬಸ್ಥರು ಸಂತ್ರಸ್ತರನ್ನು ಬುಂದೇಲ್ಖಂಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ 12 ಮಂದಿ ಕೊನೆಯುಸಿರೆಳೆದಿದ್ದಾರೆ.
ವಿಷಪೂರಿತ ಮಿಥೈಲ್ ಆಲ್ಕೋಹಾಲ್ ಶಂಕೆ:
ಸಂತ್ರಸ್ತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಪ್ರಕಾರ, ಮೃತರ ಹಾಗೂ ಅಸ್ವಸ್ಥರ ದೇಹದಲ್ಲಿ ಸೈನೋಸಿಸ್ (ದೇಹ ಮತ್ತು ಚರ್ಮ ನೀಲಿ ಬಣ್ಣಕ್ಕೆ ತಿರುಗುವುದು) ಹಾಗೂ ಸ್ನಾಯು ಬಿಗಿತದ ಲಕ್ಷಣಗಳು ಕಂಡುಬಂದಿವೆ. ಮದ್ಯದಲ್ಲಿ ಅತ್ಯಂತ ವಿಷಪೂರಿತವಾದ 'ಮಿಥೈಲ್ ಆಲ್ಕೋಹಾಲ್' ಮಿಶ್ರಣವಾಗಿರುವುದೇ ಈ ಸಾವಿಗೆ ಪ್ರಮುಖ ಕಾರಣ ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ಬಲವಾದ ಶಂಕೆ ವ್ಯಕ್ತಪಡಿಸಿದ್ದಾರೆ.
ಸಿಎಂ ಕಠಿಣ ಕ್ರಮದ ಭರವಸೆ – 6 ಅಂಗಡಿಗಳು ಸೀಲ್:
ವಿಷಯ ತಿಳಿಯುತ್ತಿದ್ದಂತೆಯೇ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಘಟನೆ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ದುರಂತಕ್ಕೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸುತ್ತಮುತ್ತಲಿನ 6 ಮದ್ಯದ ಅಂಗಡಿಗಳನ್ನು ತಕ್ಷಣವೇ ಸೀಲ್ ಮಾಡಲಾಗಿದೆ.
ಉತ್ತರ ಪ್ರದೇಶ ಗಡಿಯಿಂದ ಸಾಗಾಟವಾಗುತ್ತಿತ್ತು ನಕಲಿ ಮದ್ಯ!:
ಪ್ರಾಥಮಿಕ ತನಿಖೆಯಲ್ಲಿ ಈ ನಕಲಿ ಮದ್ಯದ ದಂಧೆಯ ಜಾಲವು ನೆರೆಯ ಉತ್ತರ ಪ್ರದೇಶದ ಲಲಿತಪುರ ಗಡಿಯಿಂದ ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ.
ಆರೋಪಿಗಳು ಲಲಿತಪುರದಲ್ಲಿ ನಕಲಿ ಮದ್ಯ ತಯಾರಿಸಿ, ಗ್ರಾಹಕರನ್ನು ನಂಬಿಸಲು ಅಸಲಿ ಬ್ರ್ಯಾಂಡ್ಗಳ ನಕಲಿ ಲೇಬಲ್, ಕ್ಯಾಪ್ ಹಾಗೂ ನಕಲಿ QR ಕೋಡ್ಗಳನ್ನು ಬಾಟಲಿಗಳಿಗೆ ಅಂಟಿಸುತ್ತಿದ್ದರು. ಬಳಿಕ ಕಾರು ಮತ್ತು ಬೈಕ್ಗಳ ಮೂಲಕ ಸಾಗರ ಜಿಲ್ಲೆಯ ಗಡಿ ಹಳ್ಳಿಗಳಿಗೆ ಅಕ್ರಮವಾಗಿ ಪೂರೈಸುತ್ತಿದ್ದರು. ಈ ಜಾಲದಲ್ಲಿ ಸ್ಥಳೀಯ ಹಳ್ಳಿಗಳ ಪ್ರಭಾವಿಗಳ ಕೈವಾಡವೂ ಇರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.




