ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚುನಾವಣೆಗೂ ಮುನ್ನ ‘ಎಲ್ಲರಿಗೂ ಫ್ರೀ’ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಈಗ ಗ್ಯಾರಂಟಿ ಯೋಜನೆಗಳಿಗೆ ಷರತ್ತುಗಳನ್ನು ವಿಧಿಸುವ ಮೂಲಕ ಜನರಿಗೆ ವಂಚಿಸುತ್ತಿದೆ ಎಂದು ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಸರ್ಕಾರದ ಇತ್ತೀಚಿನ ನಿಲುವುಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿರುವ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
‘ಚುನಾವಣೆಗೂ ಮುನ್ನ ಷರತ್ತುಗಳನ್ನು ಏಕೇ ಘೋಷಿಸಲಿಲ್ಲ?’:
"ಚುನಾವಣೆಗೆ ಮುನ್ನ ಕಾಕಾ ಪಾಟೀಲ್‌ಗೂ ಫ್ರೀ, ಮಹದೇವಪ್ಪನಿಗೂ ಫ್ರೀ ಎಂದು ಹೇಳಲಾಗಿತ್ತು. ಆದರೆ ಈಗ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಬೊಕ್ಕಸ ಬರಿದಾದಾಗ, ಕಾಕಾ ಪಾಟೀಲ ಎಲ್ಲಿಯವನು, ಮಹದೇವಪ್ಪ ಯಾವ ರಾಜ್ಯದವನು ಎಂದು ವಿಚಾರಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ" ಎಂದು ಸಿ.ಟಿ. ರವಿ ಲೇವಡಿ ಮಾಡಿದ್ದಾರೆ.
ಗ್ಯಾರಂಟಿ ಯೋಜನೆಗಳಿಗೆ ಷರತ್ತುಗಳನ್ನು ಅನ್ವಯಿಸುವ ಯೋಚನೆ ಸರ್ಕಾರಕ್ಕೆ ಇತ್ತಿದ್ದರೆ, ಅದನ್ನು ಚುನಾವಣೆಗಿಂತ ಮುಂಚಿತವಾಗಿಯೇ ಸಾರ್ವಜನಿಕರ ಮುಂದೆ ಘೋಷಿಸಬೇಕಿತ್ತು ಎಂದು ಡಿ.ಕೆ. ಶಿವಕುಮಾರ್ ಅವರನ್ನು ಉಲ್ಲೇಖಿಸಿ ಅವರು ಪ್ರಶ್ನಿಸಿದ್ದಾರೆ.
‘ತೆರಿಗೆ ಬೇಕು, ಸೌಲಭ್ಯ ಬೇಡವೇ?’:
ರಾಜ್ಯದಲ್ಲಿ ವಾಸಿಸುತ್ತಿರುವ ಅನ್ಯ ರಾಜ್ಯದವರಿಗೆ ಯೋಜನೆಗಳ ಪ್ರಯೋಜನವನ್ನು ವಿಸ್ತರಿಸುವುದಿಲ್ಲ ಎಂಬ ಸರ್ಕಾರದ ನಿಲುವನ್ನು ಪ್ರಶ್ನಿಸಿರುವ ಅವರು, "ಇಲ್ಲಿ ಉದ್ಯೋಗ ಮಾಡುತ್ತಿರುವ ಹೊರ ರಾಜ್ಯದ ಜನರು ಕಟ್ಟುವ ತೆರಿಗೆ ಸರ್ಕಾರಕ್ಕೆ ಬೇಕು. ಆದರೆ ಅವರಿಗೆ ಸರ್ಕಾರದ ಸೌಲಭ್ಯಗಳನ್ನು ಕೊಡುವುದಿಲ್ಲ ಎನ್ನುವುದು ಎಷ್ಟು ಸರಿ? ಇದು ಹೇಗೆ ನ್ಯಾಯೋಚಿತ?" ಎಂದು ವ್ಯಕ್ತಪಡಿಸಿದ್ದಾರೆ.
"ಸರ್ಕಾರಿ ನೌಕರರಿಗೆ ಸರಿಯಾಗಿ ಸಂಬಳ ನೀಡುವ ಯೋಗ್ಯತೆಯೂ ಇಲ್ಲದ ಈ ಸರ್ಕಾರದಿಂದ ರಾಜ್ಯದ ಜನತೆ ಇನ್ನೇನು ತಾನೆ ನಿರೀಕ್ಷಿಸಲು ಸಾಧ್ಯ?".
ಸಿ.ಟಿ. ರವಿ, ಬಿಜೆಪಿ ಮುಖಂಡ.
ರಾಜ್ಯದಲ್ಲಿ ಆರ್ಥಿಕ ಶಿಸ್ತು ಸಂಪೂರ್ಣವಾಗಿ ಹಳಿತಪ್ಪಿದ್ದು, ಗ್ಯಾರಂಟಿಗಳ ಹೊರೆಯಿಂದಾಗಿ ಸರ್ಕಾರಿ ನೌಕರರ ವೇತನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸರ್ಕಾರಿ ವ್ಯವಸ್ಥೆಯ ವೈಫಲ್ಯವನ್ನು ಸಿ.ಟಿ. ರವಿ ತಮ್ಮ ಪ್ರಕಟಣೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.



