ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಹರಿಹರ ತಾಲೂಕಿನ ಹನಗವಾಡಿ ಬಳಿ ಇರುವ ಪಂಚಮಸಾಲಿ ಮಠದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಶಾಂತಿ ಕದಡದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ, ಜಿಲ್ಲಾಧಿಕಾರಿ ಡಾ. ಗಂಗಾಧರಸ್ವಾಮಿ ಜಿ.ಎಂ. ಅವರು ಮಠದ ಆವರಣದಲ್ಲಿ ವಿಧಿಸಿರುವ ನಿಷೇಧಾಜ್ಞೆಯನ್ನು ಅಕ್ಟೋಬರ್31ರವರೆಗೆ ಮುಂದುವರೆಸಿ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಹರಿಹರ ಗ್ರಾಮಾಂತರ ಠಾಣಾ ವ್ಯಾಪ್ತಿಗೆ ಬರುವ ಈ ಮಠದ ಆವರಣದಲ್ಲಿ ಇತ್ತೀಚೆಗೆ ನಡೆದ ಗದ್ದಲ ಮತ್ತು ಗಲಾಟೆಗಳ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಮಹತ್ವದ ಕ್ರಮ ಕೈಗೊಂಡಿದೆ. ಮಠದ ವಾತಾವರಣ ಶಾಂತಿಯುತವಾಗಿರುವಂತೆ ನೋಡಿಕೊಳ್ಳಲು ಜಿಲ್ಲಾಡಳಿತದ ಈ ನಿರ್ಧಾರಕ್ಕೆ ಭಕ್ತ ವಲಯದಿಂದಲೂ ಬೆಂಬಲ ವ್ಯಕ್ತವಾಗಿದೆ.
ನಿಷೇಧಾಜ್ಞೆಯ ಪ್ರಮುಖ ನಿಯಮಗಳು: ಮಠದಲ್ಲಿ ಎಂದಿನಂತೆ ಧಾರ್ಮಿಕ ಪೂಜಾ ವಿಧಾನಗಳನ್ನು ಮಾತ್ರ ನಡೆಸಲು ಅವಕಾಶವಿರುತ್ತದೆ.
ಪೂಜೆಯನ್ನು ಹೊರತುಪಡಿಸಿ ಯಾವುದೇ ರೀತಿಯ ಸಭೆ, ಸಮಾರಂಭ ಹಾಗೂ ಮಾಧ್ಯಮ ಗೋಷ್ಠಿಗಳನ್ನು ನಡೆಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಹಿನ್ನೆಲೆ ಏನು?: ಮಠದ ಟ್ರಸ್ಟಿಗಳು ಹಾಗೂ ವಚನಾನಂದ ಸ್ವಾಮೀಜಿ ಅವರ ನಡುವೆ ಆಂತರಿಕವಾಗಿ ಶೀತಲ ಸಮರ ನಡೆಯುತ್ತಿದ್ದು, ಸ್ವಾಮೀಜಿಯವರಿಗೆ ಬೆಂಬಲವಾಗಿ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ನಿಂತಿದ್ದಾರೆ. ಮತ್ತೊಂದೆಡೆ, ಮಠದ ಲೆಕ್ಕಪತ್ರಗಳನ್ನು ಒಪ್ಪಿಸುವಂತೆ ಟ್ರಸ್ಟಿಗಳ ವಿರುದ್ಧ ಭಕ್ತರು ಹಾಗೂ 'ಲೆಕ್ಕ ಕೊಡಿ ಸಮಿತಿ'ಯವರು ತೀವ್ರ ಪಟ್ಟು ಹಿಡಿದಿದ್ದಾರೆ.
ಈ ಬೆಳವಣಿಗೆಗಳಿಂದ ಮಠದ ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಶಾಂತಿಭಂಗವಾಗುವ ಸಾಧ್ಯತೆಯಿದ್ದ ಕಾರಣ, ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಜಿಲ್ಲಾಡಳಿತ ಈ ಮುನ್ನೆಚ್ಚರಿಕೆ ಕ್ರಮವನ್ನು ಮುಂದುವರೆಸಿದೆ.




