ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆಧಾರ್ ಕಾರ್ಡ್‌ನಲ್ಲಿ ಹೆಣ್ಣು ಮಗುವಿನ ಹೆಸರು ಮತ್ತು ಲಿಂಗವನ್ನು ತಪ್ಪಾಗಿ ಮುದ್ರಿಸಿದ್ದಲ್ಲದೆ, ಅದನ್ನು ಸರಿಪಡಿಸುವಂತೆ ಪದೇ ಪದೆ ಮನವಿ ಮಾಡಿದರೂ ಕ್ಯಾರೇ ಎನ್ನದ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ (UIDAI) ಧೋರಣೆಯನ್ನು ಪ್ರಶ್ನಿಸಿ ತಾಯಿಯೊಬ್ಬರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಅಧಿಕಾರಿಗಳ ಈ ಬೇಜವಾಬ್ದಾರಿತನದಿಂದಾಗಿ ತಮಗೆ ಮಾನಸಿಕ ಕಿರುಕುಳವಾಗಿದೆ ಎಂದು ಆರೋಪಿಸಿರುವ ಅವರು, 10 ಲಕ್ಷ ರೂಪಾಯಿ ಪರಿಹಾರ ಕೊಡಿಸುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.
ಬೆಂಗಳೂರಿನ ಸಿಂಗೇನ ಅಗ್ರಹಾರದ ನಿವಾಸಿ ಲಕ್ಷ್ಮಿ ಎಂಬವರು ತಮ್ಮ ಅಪ್ರಾಪ್ತ ಮಗಳ ಪರವಾಗಿ ಸಲ್ಲಿಸಿರುವ ಈ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಮುಂದಿನ ವಿಚಾರಣೆಯನ್ನು ಜೂನ್ 10ಕ್ಕೆ ನಿಗದಿಪಡಿಸಿದೆ.
ಪ್ರಕರಣದ ಹಿನ್ನೆಲೆ ಏನು?
ಅರ್ಜಿದಾರರಾದ ಲಕ್ಷ್ಮಿ ಅವರ ಮಗಳು ತನುಶ್ರೀ 2015ರ ಜುಲೈ 22ರಂದು ಜನಿಸಿದ್ದಾಳೆ. ಜನನ ಪ್ರಮಾಣಪತ್ರ ಮತ್ತು ಶಾಲಾ ದಾಖಲಾತಿ ಪತ್ರಗಳಲ್ಲಿ ಮಗುವಿನ ಹೆಸರು 'ತನುಶ್ರೀ, ಹೆಣ್ಣು' ಎಂದೇ ಸ್ಪಷ್ಟವಾಗಿ ದಾಖಲಾಗಿದೆ. ಆದರೆ, ಯುಐಡಿಎಐ ನೀಡಿರುವ ಆಧಾರ್ ಕಾರ್ಡ್‌ನಲ್ಲಿ ಮಾತ್ರ ಮಗುವಿನ ಹೆಸರನ್ನು 'ಪೂಜಾ' ಎಂದು ಮತ್ತು ಲಿಂಗದ ಜಾಗದಲ್ಲಿ 'ಗಂಡು' ಎಂದು ಸಂಪೂರ್ಣವಾಗಿ ತಪ್ಪಾಗಿ ಮುದ್ರಿಸಲಾಗಿದೆ.
ಕಚೇರಿಗಳಿಗೆ ಅಲೆದಾಟ, ಲೀಗಲ್ ನೋಟಿಸ್‌ಗೂ ಇಲ್ಲ ಬೆಲೆ!
ಆಧಾರ್‌ನಲ್ಲಿ ಆಗಿರುವ ಈ ದೊಡ್ಡ ತಪ್ಪು ಸರಿಪಡಿಸಲು ಲಕ್ಷ್ಮಿ ಅವರು ಮಗುವಿನ ನೈಜ ದಾಖಲೆಗಳೊಂದಿಗೆ ಸ್ಥಳೀಯ ಆಧಾರ್ ಕೇಂದ್ರಗಳು ಹಾಗೂ ಯುಐಡಿಎಐ ಪ್ರಾದೇಶಿಕ ಕಚೇರಿಗೆ ಹಲವು ಬಾರಿ ಅಲೆದಾಡಿದ್ದಾರೆ. ಆದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.
ಕೊನೆಗೆ ಬೇರೆ ದಾರಿಯಿಲ್ಲದೆ, 2026ರ ಮಾರ್ಚ್ 24ರಂದು ಯುಐಡಿಎಐ ಕೇಂದ್ರ ಕಚೇರಿ ಮತ್ತು ಬೆಂಗಳೂರು ಪ್ರಾದೇಶಿಕ ಕಚೇರಿಗೆ ತಾಯಿ ಲಕ್ಷ್ಮಿ ಅವರು ವಕೀಲರ ಮೂಲಕ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ. ಆದಾಗ್ಯೂ ಅಧಿಕಾರಿಗಳಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ಕದ ತಟ್ಟಿದ್ದಾರೆ.
ಬಾಲಕಿಯ ಹಕ್ಕುಗಳ ಉಲ್ಲಂಘನೆ: ಅರ್ಜಿಯಲ್ಲಿನ ಪ್ರಮುಖ ಅಂಶಗಳು ಮೂಲಭೂತ ಹಕ್ಕುಗಳ ಧಕ್ಕೆ: ಅಧಿಕಾರಿಗಳ ಈ ಬೇಜವಾಬ್ದಾರಿತನ ಸಂವಿಧಾನದ ವಿಧಿ 14 (ಸಮಾನತೆಯ ಹಕ್ಕು) ಮತ್ತು ವಿಧಿ 21ರ (ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು) ಅಡಿಯಲ್ಲಿ ನಾಗರಿಕರ ಮೂಲಭೂತ ಹಕ್ಕುಗಳ ನೇರ ಉಲ್ಲಂಘನೆಯಾಗಿದೆ.
ಶೈಕ್ಷಣಿಕ, ಸಾಮಾಜಿಕ ಸಮಸ್ಯೆ: ಆಧಾರ್ ಕಾರ್ಡ್‌ನಲ್ಲಿನ ತಪ್ಪಿನಿಂದಾಗಿ ಮಗುವಿಗೆ ಶಾಲಾ ಪ್ರವೇಶ ಪಡೆಯಲು, ಸರ್ಕಾರದ ಸೌಲಭ್ಯಗಳನ್ನು ತಲುಪಲು ಹಾಗೂ ಇತರ ಗುರುತಿನ ಚೀಟಿಗಳನ್ನು ಪಡೆಯಲು ಭಾರಿ ಸಮಸ್ಯೆಯಾಗುತ್ತಿದೆ. ಇದು ಬಾಲಕಿಯ ಶೈಕ್ಷಣಿಕ ಮತ್ತು ಸಾಮಾಜಿಕ ಭವಿಷ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.
ಮಾನಸಿಕ ಹಿಂಸೆ: ಸಣ್ಣ ತಪ್ಪನ್ನು ತಿದ್ದಿಕೊಳ್ಳಲು ವ್ಯವಸ್ಥೆಯ ಜೊತೆ ಹೋರಾಡುತ್ತಿರುವ ತಾಯಿ-ಮಗಳು ಪ್ರತಿದಿನ ತೀವ್ರ ಮಾನಸಿಕ ಕಿರುಕುಳ ಅನುಭವಿಸುವಂತಾಗಿದೆ.
ಅರ್ಜಿದಾರರ ಪರ ವಕೀಲರ ಬೇಡಿಕೆ:
ಆಧಾರ್ ಕಾರ್ಡ್‌ನಲ್ಲಿರುವ 'ಪೂಜಾ, ಗಂಡು' ಎಂಬ ತಪ್ಪು ಮಾಹಿತಿಯನ್ನು ತಕ್ಷಣವೇ ತೆಗೆದುಹಾಕಿ 'ತನುಶ್ರೀ, ಹೆಣ್ಣು' ಎಂದು ತಿದ್ದುಪಡಿ ಮಾಡಲು ಯುಐಡಿಎಐಗೆ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ಸಾರ್ವಜನಿಕರಿಗೆ ಕಿರುಕುಳ ನೀಡಿ, ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳಿಗೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗಳ ಹಿಂದಿನ ತೀರ್ಪುಗಳ ಅನ್ವಯ 10 ಲಕ್ಷ ರೂಪಾಯಿಗಳ ದಂಡ ವಿಧಿಸಿ, ಆ ಮೊತ್ತವನ್ನು ಸಂತ್ರಸ್ತರಿಗೆ ಪರಿಹಾರವಾಗಿ ಕೊಡಿಸಬೇಕು ಎಂದು ಅರ್ಜಿಯಲ್ಲಿ ವಿನಂತಿಸಲಾಗಿದೆ.



