ಚಂದ್ರವಳ್ಳಿ ನ್ಯೂಸ್, ಮೈಸೂರು:
ಕುಟುಂಬದ ಸಂಭ್ರಮ, ಸಂಪ್ರದಾಯ ಮತ್ತು ಸಾಹಿತ್ಯ ಒಂದೇ ವೇದಿಕೆಯಲ್ಲಿ ಬೆಸೆದ ಅಪರೂಪದ ಕ್ಷಣಕ್ಕೆ ನಗರದ ಶ್ರೀ ಹರಿ ಕನ್ವೆನ್ಷನ್ ಸೆಂಟರ್, ಆದಿತ್ಯ ಸರ್ಕಲ್ ರಿಂಗ್‌ರೋಡ್, ಸೋಮನಾಥನಗರದಲ್ಲಿ ನಡೆದ ಗಗನಾ ಎನ್. ಹಾಗೂ ಪವನ್ ಕುಮಾರ್ ಆರ್. ಅವರ ನಿಶ್ಚಿತಾರ್ಥ ಸಮಾರಂಭ ಸಾಕ್ಷಿಯಾಯಿತು. ಈ ಸಂದರ್ಭದಲ್ಲಿ ಸಾಹಿತಿ ಕಾಶಿಗೌ ಅವರ ಐದು ಕೃತಿಗಳ ಲೋಕಾರ್ಪಣೆ ನಡೆಯುವ ಮೂಲಕ ಸಮಾರಂಭವು ವಿಶಿಷ್ಟ ಮೆರುಗು ಪಡೆದುಕೊಂಡಿತು.
ಲೇಖಕ ಕಾಶಿಗೌ ಅವರ "ಕವನದ ಕಣ್ಣು", "ಚಿತ್ತಾನುಭವ", "ಬಾಳ ದೀಪ್ತಿ", "ಹೃದಯ ಪ್ರಭೆ" ಹಾಗೂ "ಭಾವ ಪ್ರಭೆ" ಕೃತಿಗಳನ್ನು ಭಾವಿ ವಧು-ವರರು ಮತ್ತು ಉಭಯ ಕುಟುಂಬದ ಸದಸ್ಯರು ಸಂಭ್ರಮದಿಂದ ಬಿಡುಗಡೆ ಮಾಡಿದರು. ಶುಭ ಸಮಾರಂಭದಲ್ಲೇ ಪಂಚ ಕೃತಿಗಳ ಅನಾವರಣ ನಡೆದಿರುವುದು ಸಾಹಿತ್ಯಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.
ಮದುವೆಯಂತಹ ಶುಭ ಸಂದರ್ಭಗಳಲ್ಲಿ ಜ್ಞಾನ ಮತ್ತು ಸಾಹಿತ್ಯಕ್ಕೂ ಸಮಾನ ಗೌರವ ನೀಡಬೇಕು ಎಂಬ ಸಂದೇಶವನ್ನು ಈ ಕಾರ್ಯಕ್ರಮ ಸಾರಿತು. ಕುಟುಂಬದ ಸಂಭ್ರಮದ ನಡುವೆ ಪುಸ್ತಕಗಳ ಲೋಕಾರ್ಪಣೆ ನಡೆದಿರುವುದು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದು, ನೆರೆದಿದ್ದವರು ಈ ವಿನೂತನ ಪರಿಕಲ್ಪನೆಯನ್ನು ಶ್ಲಾಘಿಸಿದರು. ನವಜೀವನದ ಆರಂಭವನ್ನು ಜ್ಞಾನದ ಬೆಳಕಿನೊಂದಿಗೆ ಜೋಡಿಸುವ ಪ್ರಯತ್ನವಾಗಿ ಈ ಕಾರ್ಯಕ್ರಮ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಹಿರಿಯ ವಾಣಿಜ್ಯ ಉಪನ್ಯಾಸಕರಾದ ಬಾಲರಾಜ್, ಜೀವಶಾಸ್ತ್ರ ಉಪನ್ಯಾಸಕ ಸುರೇಂದ್ರ, ಉಪನ್ಯಾಸಕರಾದ ಆನಂದ್ ಕುಮಾರ್, ಕನ್ನಡ ಉಪನ್ಯಾಸಕರಾದ ಮಹೇಶ್, ದಕ್ಷಿಣಮೂರ್ತಿ ಹೆಚ್. ಬಿ., ನಿವೃತ್ತ ಪ್ರಾಂಶುಪಾಲರಾದ ಮಂಜುನಾಥ್ ಎನ್. ಜೆ., ಅರ್ಥಶಾಸ್ತ್ರ ಉಪನ್ಯಾಸಕ ರಾಜಗೋಪಾಲ್, ಕೆ. ಎಸ್. ಪ್ರಮೋದ್ ಕುಮಾರ್, ಉಪನ್ಯಾಸಕ ಜಗದೀಶ್, ಗಗನ್ ಕುಮಾರ್, ಕುಮಾರ್ ಯಶ್ವನ್, ನಿವೃತ್ತ ಶಿಕ್ಷಕರು, ಉಭಯ ಕುಟುಂಬದ ಸದಸ್ಯರು, ಬಂಧು-ಬಳಗ, ಸ್ನೇಹಿತರು, ಸಾಹಿತ್ಯಾಸಕ್ತರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.



