ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಹಿಳೆಯರ ಬಟ್ಟೆಗಳನ್ನು ಕಳ್ಳತನ ಮಾಡುತ್ತಿದ್ದಲ್ಲದೆ, ಆ ಕೃತ್ಯವನ್ನು ಪತ್ತೆ ಹಚ್ಚಲು ಅಳವಡಿಸಿದ್ದ ರಹಸ್ಯ ಕ್ಯಾಮೆರಾದ ಮುಂಭಾಗದಲ್ಲೇ ಅತ್ಯಂತ ಅಶ್ಲೀಲವಾಗಿ ವರ್ತಿಸಿದ್ದ ಅಸ್ಸಾಂ ಮೂಲದ ಆರೋಪಿಯೊಬ್ಬನನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ.
ಅಸ್ಸಾಂ ಮೂಲದ ಅಬ್ದುಲ್ ಹುಸೇನ್ ಬಂಧಿತ ಆರೋಪಿಯಾಗಿದ್ದು, ಈತ ನಗರದ ಖಾಸಗಿ ಕಂಪನಿಯೊಂದರಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹಳೇ ಬಟ್ಟೆ ತಂದಿಟ್ಟು, ಹೊಸ ಬಟ್ಟೆ ಕದಿಯುತ್ತಿದ್ದ ವಿಕೃತ!:
ಬೆಂಗಳೂರಿನ ಹೊಯ್ಸಳ ನಗರದಲ್ಲಿ ಯುವತಿಯೊಬ್ಬರು ತಮ್ಮ ಸ್ನೇಹಿತೆಯ ಜೊತೆ ವಾಸವಾಗಿದ್ದರು. ಕಳೆದ ಮೇ ತಿಂಗಳಿಂದ ಇವರ ಮನೆಯ ಕಾಂಪೌಂಡ್‌ನೊಳಗೆ ಒಣಗಲು ಹಾಕಿದ್ದ ಮಹಿಳೆಯರ ಬಟ್ಟೆಗಳು ಪದೇ ಪದೆ ಕಳವಾಗುತ್ತಿದ್ದವು. ಕಳ್ಳತನದ ಹಾದಿ ಎಷ್ಟು ವಿಚಿತ್ರವಾಗಿತ್ತೆಂದರೆ, ಆರೋಪಿಯು ಕೆಲ ದಿನಗಳ ಬಳಿಕ ತಾನು ಕದ್ದ ಹಳೆಯ ಬಟ್ಟೆಗಳನ್ನು ತಂದು ಮರಳಿ ಅಲ್ಲೇ ಇಟ್ಟು, ಹೊಸ ಬಟ್ಟೆಗಳನ್ನು ಮಾತ್ರ ಕದ್ದೊಯ್ಯುತ್ತಿದ್ದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ಕಳ್ಳನನ್ನು ಹಿಡಿಯಲು ಇಟ್ಟ ಕ್ಯಾಮೆರಾದಲ್ಲೇ ವಿಕೃತಿ ಸೆರೆ!:
ಪದೇ ಪದೆ ನಡೆಯುತ್ತಿದ್ದ ಈ ವಿಚಿತ್ರ ಕಳ್ಳತನದಿಂದ ಬೇಸತ್ತ ಯುವತಿ, ಕಳ್ಳನನ್ನು ಪತ್ತೆ ಹಚ್ಚಲು ಜುಲೈ 1ರಂದು ಮನೆಯ ಆವರಣದಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿದ್ದರು. ಜುಲೈ 2ರಂದು ನಸುಕಿನ ಜಾವ ಸುಮಾರು 3 ಗಂಟೆಗೆ ಆರೋಪಿ ಅಬ್ದುಲ್ ಹುಸೇನ್ ಕಾಂಪೌಂಡ್ ಒಳಗೆ ಅಕ್ರಮವಾಗಿ ನುಗ್ಗಿದ್ದಾನೆ. ಈ ಹಿಂದೆ ತಾನು ಕದ್ದಿದ್ದ ಮಹಿಳೆಯರ ಬಟ್ಟೆಗಳನ್ನೇ ಧರಿಸಿಕೊಂಡು ಬಂದು, ಮತ್ತೆ ಹೊಸ ಬಟ್ಟೆಗಳನ್ನು ಕಳವು ಮಾಡಿದ್ದಾನೆ. ಅಷ್ಟೇ ಅಲ್ಲದೆ, ಅಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾವನ್ನು ಗಮನಿಸಿ ಅದರ ಎದುರೇ ಅತ್ಯಂತ ಅಶ್ಲೀಲವಾಗಿ ವರ್ತಿಸಿ ವಿಕೃತಿ ಮೆರೆದಿದ್ದಾನೆ.
ಕ್ಯಾಮೆರಾದಲ್ಲಿದ್ದ ದೃಶ್ಯಾವಳಿಗಳನ್ನು ನೋಡಿ ಆಘಾತಕ್ಕೊಳಗಾದ ಯುವತಿ, ತಕ್ಷಣವೇ ಇಂದಿರಾನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು.
ಪೊಲೀಸರ ತನಿಖೆ ಮತ್ತು ಬಂಧನ:
ಯುವತಿ ನೀಡಿದ ದೂರಿನನ್ವಯ ಕಾರ್ಯಪ್ರವೃತ್ತರಾದ ಇಂದಿರಾನಗರ ಪೊಲೀಸರು ಆರೋಪಿ ಅಬ್ದುಲ್ ಹುಸೇನ್‌ನನ್ನು ಬಂಧಿಸಿದ್ದಾರೆ. ಬಂಧನದ ಬಳಿಕ ಆರೋಪಿಯು ಸದ್ಯ ಜಾಮೀನಿನ ಮೇರೆಗೆ ಹೊರಬಂದಿದ್ದಾನೆ. ವಿಚಾರಣೆಯ ವೇಳೆ ಆರೋಪಿಯು ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದು, ಈತನ ಹಿನ್ನೆಲೆ ಹಾಗೂ ಕೃತ್ಯದ ಉದ್ದೇಶದ ಕುರಿತು ಮತ್ತಷ್ಟು ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.



