ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
"ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ದೇಶದ ಅರ್ಹ ಮತದಾರರ ಮತದಾನದ ಹಕ್ಕು ಕಸಿಯುವ ದೊಡ್ಡ ಪ್ರಯತ್ನ ನಡೆಯುತ್ತಿದೆ" ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರೈ ತೀವ್ರವಾಗಿ ಆರೋಪಿಸಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಕೂಡಲೇ ಪದಚ್ಯುತಿಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಬಳ್ಳಾರಿ ನಗರದಲ್ಲಿ ನಾಗರಿಕ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳ ಮುಖಂಡರೊಂದಿಗೆ ನಡೆದ ಎಸ್‌ಐಆರ್ ವಿರೋಧಿ ಸಮಾವೇಶದಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ವ್ಯಾಪಕ ಅಕ್ರಮಗಳು ನಡೆಯುತ್ತಿವೆ ಎಂದು ದೂರಿದರು.
ಅರ್ಹ ಮತದಾರರ ಹೆಸರು ಕೈಬಿಡುವ ಹುನ್ನಾರ: ಸರ್ಕಾರ ಮತ್ತು ಚುನಾವಣಾ ಆಯೋಗವು ಎಸ್‌ಐಆರ್ ಹೆಸರಿನಲ್ಲಿ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಉದ್ದೇಶಪೂರ್ವಕವಾಗಿ ಕೈಬಿಡುವ ಸಂಚು ರೂಪಿಸಿವೆ ಎಂದ ಪ್ರಕಾಶ್ ರಾಜ್, "ಈ ಪ್ರಕ್ರಿಯೆಯು ಎಲ್ಲರನ್ನೂ ಒಳಗೊಂಡಿಲ್ಲ. ಬದುಕಿರುವ ಜನರನ್ನು ಸತ್ತವರೆಂದು ಗುರುತಿಸಲಾಗಿದೆ. ಜೀವಂತವಾಗಿರುವವರ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿರುವುದನ್ನು ಪ್ರಶ್ನಿಸಿದರೆ, ಫಾರಂ-6 ತುಂಬಿ ಹೊಸದಾಗಿ ಹೆಸರು ನೋಂದಾಯಿಸಿಕೊಳ್ಳಿ ಎಂದು ಬೇಜವಾಬ್ದಾರಿಯಿಂದ ಹೇಳಲಾಗುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿ, ಹರಿಯಾಣ ಹಾಗೂ ಪಶ್ಚಿಮ ಬಂಗಾಳದಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆಯನ್ನು ಉಲ್ಲೇಖಿಸಿದ ಅವರು, ಚುನಾವಣೆಗಳಲ್ಲಿ ಬೇಕಾದ ಫಲಿತಾಂಶವನ್ನು ತರುವ ದುರುದ್ದೇಶದಿಂದಲೇ ವಿವಿಧ ರಾಜ್ಯಗಳಲ್ಲಿ ಈ ತಂತ್ರ ಅನುಸರಿಸಲಾಗುತ್ತಿದ್ದು, ಇದರ ಹಿಂದೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನೇರ ಪಾತ್ರವಿದೆ ಎಂದು ಆರೋಪಿಸಿದರು.
ಅಕ್ಟೋಬರ್ 15ರಂದು ದೆಹಲಿಯಲ್ಲಿ ಬೃಹತ್ ಹೋರಾಟ:
"ಎಸ್‌ಐಆರ್‌ನ ಲೋಪದೋಷಗಳನ್ನು ಜನರ ಮುಂದಿಟ್ಟು ಇದರ ವಿರುದ್ಧ ಸಾರ್ವಜನಿಕರು ಧ್ವನಿ ಎತ್ತಬೇಕಿದೆ. ಈ ಹೋರಾಟ ಈಗ ಹೊಸ ಸ್ವರೂಪ ಪಡೆದುಕೊಳ್ಳಲಿದೆ. ಜ್ಞಾನೇಶ್ ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿ ಅಕ್ಟೋಬರ್ 15ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಇದು ಮತ್ತೊಂದು ಸ್ವಾತಂತ್ರ್ಯ ಹೋರಾಟದ ರೂಪ ಪಡೆಯಲಿದೆ" ಎಂದು ಅವರು ಎಚ್ಚರಿಸಿದರು.
ಫಾರಂ-7 ದುರುಪಯೋಗ, ಮುಸ್ಲಿಂ ಮತದಾರರ ಹೆಸರು ನಾಶ?:
ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ 22 ಮತಗಟ್ಟೆಗಳಲ್ಲಿ ನೂರಾರು ಮುಸ್ಲಿಂ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ನಕಲಿ ಹಾಗೂ ಮುಂಚಿತವಾಗಿ ಮುದ್ರಿಸಲಾದ ಫಾರಂ-7ಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಪ್ರಕಾಶ್ ರಾಜ್ ಗಂಭೀರ ಆರೋಪ ಮಾಡಿದರು. ಈ ಕುರಿತು ಸ್ಥಳೀಯರು ಮತ್ತು ಬಿಎಲ್‌ಒಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದರು.
"ಬೆಳಗಾವಿಯ ಒಂದು ಮತಗಟ್ಟೆಯಲ್ಲಿ ಬಿಜೆಪಿ ಯುವ ಮೋರ್ಚಾ ಹೆಸರಿನಲ್ಲಿ ಸುಮಾರು 200 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಲು ಅರ್ಜಿ ಸಲ್ಲಿಸಲಾಗಿದೆ.
ಈ ಸಂಬಂಧ ಈಗಾಗಲೇ ದೂರು ದಾಖಲಾಗಿದ್ದು, ಶುಕ್ರವಾರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಯಲಿದೆ" ಎಂದು ತಿಳಿಸಿದರು. ಮತಗಟ್ಟೆ ಮಟ್ಟದ ಅಧಿಕಾರಿಗೆ ಕರೆ ಮಾಡಿ ಮುಸ್ಲಿಂ ಸಮುದಾಯದ ನೂರಾರು ಮತದಾರರ ಹೆಸರುಗಳನ್ನು ಅಳಿಸುವಂತೆ ಒತ್ತಡ ಹೇರಲಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ ಎಂದರು.
ಗೃಹ ಸಚಿವರಿಗೆ ದೂರು ಹಾಗೂ ದಾಖಲೆ ಬಿಡುಗಡೆ:
"ಈ ಎಲ್ಲ ಅಕ್ರಮಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೆ ತಂದು ದೂರು ಸಲ್ಲಿಸಲಾಗುವುದು. ದಾಖಲೆಗಳ ಆಧಾರದ ಮೇಲೆ ಸಂಬಂಧಪಟ್ಟವರ ಹೆಸರುಗಳನ್ನು ಬಹಿರಂಗಪಡಿಸಿ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಲಾಗುವುದು. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಈ ಕುರಿತ ಸಂಪೂರ್ಣ ಮಾಹಿತಿಯನ್ನು ರಾಜ್ಯದ ಜನರ ಮುಂದಿಡಲಾಗುವುದು" ಎಂದು ಪ್ರಕಾಶ್ ರಾಜ್ ಸ್ಪಷ್ಟಪಡಿಸಿದರು.




