ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹೊಸದಾಗಿ ನಿರ್ಮಾಣವಾದ ಬೀದರ್ - ಶ್ರೀರಂಗಪಟ್ಟಣ ಹೆದ್ದಾರಿಯಿಂದಾಗಿ ಹಿರಿಯೂರು ನಗರಕ್ಕೆ ರಾತ್ರಿ ವೇಳೆ ಆಗಮಿಸುವ ಪ್ರಯಾಣಿಕರಿಗೆ, ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರಿಗೆ ದೊಡ್ಡ ಮಟ್ಟದ ಸುರಕ್ಷತೆಯ ಸಮಸ್ಯೆ ಎದುರಾಗಿದೆ.
ಎರಡು ವರ್ಷಗಳ ಹಿಂದೆ ಹಿರಿಯೂರು ಹೊರವಲಯದಲ್ಲಿ ಬೈಪಾಸ್ ರಸ್ತೆ ನಿರ್ಮಾಣವಾದ ಬಳಿಕ, ಬಳ್ಳಾರಿ, ರಾಯಚೂರು, ಕಲಬುರ್ಗಿ ಹಾಗೂ ಬೀದರ್ ಕಡೆಗೆ ಸಂಚರಿಸುವ ಮತ್ತು ಬೆಂಗಳೂರಿನತ್ತ ಬರುವ ಸಾರಿಗೆ ಸಂಸ್ಥೆ ಬಸ್ಗಳು ರಾತ್ರಿ 10 ಗಂಟೆಯ ನಂತರ ನಗರದೊಳಗೆ ಬಾರದೆ ಬೈಪಾಸ್ನಲ್ಲೇ ತೆರಳುತ್ತಿವೆ. ಇದರಿಂದ ರಾತ್ರಿ ವೇಳೆ ಬರುವ ಪ್ರಯಾಣಿಕರು ನಿರ್ಜನ ಹಾಗೂ ಕತ್ತಲು ಹಾದಿಯಲ್ಲಿ ಒಂದು ಕಿಲೋಮೀಟರ್ಗೂ ಅಧಿಕ ದೂರ ನಡೆದುಕೊಂಡು ನಗರಕ್ಕೆ ಬರುವ ದುಸ್ಥಿತಿ ನಿರ್ಮಾಣವಾಗಿದೆ.
ಪ್ರಯಾಣಿಕರೊಬ್ಬರ ಕಹಿ ಅನುಭವ: ಹಿರಿಯೂರಿನ ಎಂ.ಜಿ. ರಂಗಸ್ವಾಮಿ ಎಂಬುವವರು ಸೆಪ್ಟೆಂಬರ್ 27ರ ರಾತ್ರಿ ರಾಯಚೂರು ಘಟಕ-3ರ ಬಸ್ ನಿಲ್ದಾಣದಲ್ಲಿ ಹಿರಿಯೂರು ಪ್ರಯಾಣಕ್ಕಾಗಿ ಟಿಕೆಟ್ ಕೇಳಿದಾಗ, ಕಂಡಕ್ಟರ್ "ಹಿರಿಯೂರುಗೆ ಹೋಗುವುದಿಲ್ಲ, ಬೇರೆ ಬಸ್ನಲ್ಲಿ ಹೋಗಿ" ಎಂದು ಹಾರಿಕೆ ಉತ್ತರ ನೀಡಿದ್ದಾರೆ. ಬಳಿಕ ಬಹಳಷ್ಟು ಮನವಿ ಮಾಡಿದ ಮೇಲೆ "ಬೈಪಾಸ್ ರಸ್ತೆಯಲ್ಲಿ ಇಳಿಸುವುದಾದರೆ ಮಾತ್ರ ಟಿಕೆಟ್" ಎಂದು ಷರತ್ತು ವಿಧಿಸಿ ಟಿಕೆಟ್ ನೀಡಿದ್ದಾರೆ.
ಆ ಬಸ್ ರಾತ್ರಿ 1:30ರ ಸುಮಾರಿಗೆ ಹಿರಿಯೂರು ಬೈಪಾಸ್ ತಲುಪಿದ್ದು, ಅಲ್ಲಿಂದ ನಗರದೊಳಗೆ ಬರಲು ಯಾವುದೇ ಆಟೋ ಅಥವಾ ಇತರೆ ಸಾರಿಗೆ ಸೌಲಭ್ಯ ಸಿಗದೆ, ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಕತ್ತಲ ಹಾದಿಯಲ್ಲಿ ನಡೆದುಕೊಂಡು ಬರುವಂತಾಯಿತು ಎಂದು ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸಾರ್ವಜನಿಕರ ಆಗ್ರಹ: ರಾತ್ರಿ ವೇಳೆ ಬೈಪಾಸ್ನಲ್ಲಿ ಇಳಿಯುವ ಪ್ರಯಾಣಿಕರಿಗೆ ಯಾವುದೇ ಸಾರಿಗೆ ಸೌಲಭ್ಯವಿಲ್ಲದಿರುವುದರಿಂದ ಅಪಘಾತಗಳು ಹಾಗೂ ಅಹಿತಕರ ಘಟನೆಗಳು ನಡೆಯುವ ಆತಂಕವಿದೆ. ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸುವ ಸಾರಿಗೆ ನೌಕರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ಈ ಕೂಡಲೇ ಸಾರಿಗೆ ಸಚಿವರು, ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ಘಟಕ ವ್ಯವಸ್ಥಾಪಕರು ಈ ಗಂಭೀರ ಸಮಸ್ಯೆಯ ಬಗ್ಗೆ ಗಮನ ಹರಿಸಿ, ರಾತ್ರಿ ವೇಳೆ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ಸಾರಿಗೆ ಸಂಸ್ಥೆ ಬಸ್ಗಳು ಕಡ್ಡಾಯವಾಗಿ ಹಿರಿಯೂರು ನಗರದ ಒಳಗೆಯೇ ಹಾದುಹೋಗುವಂತೆ ಚಾಲಕರು ಮತ್ತು ನಿರ್ವಾಹಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಹಿರಿಯೂರಿನ ಎಂ.ಜಿ. ರಂಗಸ್ವಾಮಿ ಅವರು ಸಾರಿಗೆ ಇಲಾಖೆಯನ್ನು ಒತ್ತಾಯಿಸಿದ್ದಾರೆ.




