ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳ ಆರೋಗ್ಯ ಹಾಗೂ ಪೌಷ್ಟಿಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಪುಣೆಯ ಉದ್ಯಮಿ ವಿಶ್ವನಾಥ ಶೇಲಾರ್ ಅವರು ಕೈಗೊಂಡಿರುವ ವಿಶೇಷ ಸೇವಾ ಕೈಂಕರ್ಯ ನಿಜಕ್ಕೂ ಶ್ಲಾಘನೀಯ ಎಂದು ಶಾಲೆಯ ಮುಖ್ಯ ಶಿಕ್ಷಕ ಟಿ.ಪಿ. ಉಮೇಶ್ ತಿಳಿಸಿದ್ದಾರೆ.
ಸರ್ಕಾರವು ಈಗಾಗಲೇ ಶಾಲೆಗಳಲ್ಲಿ ಬೆಳಗಿನ ಹಾಲು ಹಾಗೂ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆ ಮಾಡಿದೆ. ಇದರ ಜೊತೆಗೆ, ಶಾಲೆಯ ಮಕ್ಕಳಿಗೆ ಪ್ರತಿದಿನ ಬೆಳಿಗ್ಗೆ ಹಾಲಿನೊಂದಿಗೆ ಬಾದಾಮಿ ಮಿಕ್ಸ್ ಹಾಗೂ ಬಿಸ್ಕೆಟ್ ವಿತರಿಸಲು ಉದ್ಯಮಿ ವಿಶ್ವನಾಥ ಶೇಲಾರ್ ಅವರು ನೆರವು ನೀಡುತ್ತಿದ್ದಾರೆ. ಈ ಪೌಷ್ಟಿಕ ಆಹಾರವು ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದ್ದು, ಶಾಲಾ ಶಿಕ್ಷಕರು, ಪೋಷಕರು ಹಾಗೂ ಗ್ರಾಮಸ್ಥರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗಿದೆ.
ಪುಣೆಯಲ್ಲಿ ಸ್ವಂತ ಉದ್ಯಮ ನಡೆಸುತ್ತಾ ನೂರಾರು ಜನರಿಗೆ ಆಸರೆಯಾಗಿರುವ ವಿಶ್ವನಾಥ ಶೇಲಾರ್ ಅವರು, ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಂದ ಪ್ರೇರಿತರಾಗಿ ಈ ಸಹಾಯಕ್ಕೆ ಮುಂದಾಗಿದ್ದಾರೆ. ಅವರ ಈ ಸಮಾಜಮುಖಿ ಚಿಂತನೆ ಹಾಗೂ ಉದಾರ ಕೊಡುಗೆ ಇತರರಿಗೂ ಮಾದರಿಯಾಗಿದೆ ಎಂದು ಮುಖ್ಯ ಶಿಕ್ಷಕರು ಹರ್ಷ ವ್ಯಕ್ತಪಡಿಸಿದರು.
ದಾನಿಗಳ ಈ ಕಳಕಳಿಯ ಸೇವೆಗೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಟಿ. ಗೋವಿಂದಪ್ಪ, ಸದಸ್ಯರಾದ ಮಂಜುನಾಥ್, ರಂಗಸ್ವಾಮಿ, ಕಾಂತರಾಜು, ಬಸವರಾಜು, ತಿಮ್ಮಮ್ಮ ಹಾಗೂ ಶಾರದಮ್ಮ ಅವರು ವಿಶೇಷ ಕೃತಜ್ಞತೆ ಸಲ್ಲಿಸಿದ್ದಾರೆ.



