ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕನ್ನು ಈಗಾಗಲೇ ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದ್ದು, ಈ ಭಾಗದ ರೈತರ ಜಾನುವಾರುಗಳಿಗೆ ತಕ್ಷಣ ಮೇವು ಒದಗಿಸುವುದು ತೀರಾ ಅಗತ್ಯವಾಗಿದೆ. ಆದರೆ ಯಲ್ಲದಕೆರೆ ಪಶು ಆಸ್ಪತ್ರೆ ವ್ಯಾಪ್ತಿಯ 26 ಹಳ್ಳಿಗಳ ರೈತರಿಗೆ ಕೇವಲ 200 ಪ್ಯಾಕೆಟ್ ಮೇವಿನ ಬೀಜಗಳನ್ನು ಉಚಿತವಾಗಿ ವಿತರಿಸಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಕುರಿತು ಮಾತನಾಡಿರುವ ಭಾರತೀಯ ಕಿಸಾನ್ ಸಂಘದ ಕಾರ್ಯದರ್ಶಿ ಕೆ.ಕೆ. ಹಟ್ಟಿಯ ಜಯಪ್ರಕಾಶ್ ಅವರು, ಯಲ್ಲದಕೆರೆ ಪಶು ಆಸ್ಪತ್ರೆ ವ್ಯಾಪ್ತಿಯಲ್ಲಿ ಸುಮಾರು 2,600 ರಾಸುಗಳಿದ್ದು, ಈ ಭಾಗದ ರೈತರಿಗೆ ಸಮರ್ಪಕವಾಗಿ ವಿತರಿಸಲು ಕನಿಷ್ಠ 1,000 ಪ್ಯಾಕೆಟ್ ಮೇವಿನ ಬೀಜಗಳ ಅಗತ್ಯವಿತ್ತು. ಆದರೆ ಇಲಾಖೆಯು ಅತ್ಯಲ್ಪ ಪ್ರಮಾಣದ ಬೀಜ ವಿತರಿಸಿ ಕೈತೊಳೆದುಕೊಂಡಿರುವುದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.
ಬರದ ಪರಿಸ್ಥಿತಿಯಿಂದಾಗಿ ರೈತರು ಈಗಾಗಲೇ ಸಂಕಷ್ಟದಲ್ಲಿದ್ದು, ಜಾನುವಾರುಗಳನ್ನು ಸಾಕುವುದೇ ಕಷ್ಟಕರವಾಗಿದೆ. ಆದ್ದರಿಂದ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಅಗತ್ಯ ಪ್ರಮಾಣದಲ್ಲಿ ಮೇವಿನ ಬೀಜಗಳನ್ನು ವಿತರಿಸಬೇಕು. ಜೊತೆಗೆ ಹಿರಿಯೂರು ತಾಲೂಕಿನಲ್ಲಿ ಎದುರಾಗಿರುವ ಮೇವಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಕೂಡಲೇ 'ಮೇವು ಬ್ಯಾಂಕ್' ಆರಂಭಿಸಬೇಕು ಎಂದು ಅವರು ಗಂಭೀರವಾಗಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಶು ಆಸ್ಪತ್ರೆಯ ಸಿಬ್ಬಂದಿ ಹಾಗೂ ರೈತ ಮುಖಂಡರಾದ ಮಂಜುನಾಥ್ ಬಿ.ಕೆ., ರೇವಣ್ಣ, ಕುಚಲ್ ಕುಮಾರ್, ಜೆ. ಬೈರಪ್ಪ, ಚಿಗಲಿಕಟ್ಟೆ ರಂಗನಾಥ್, ನರೇಂದ್ರ ಸೇರಿದಂತೆ ಹಲವು ರೈತರು ಉಪಸ್ಥಿತರಿದ್ದರು.



