ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಫೆಮಿನಾ ಮಿಸ್ ಇಂಡಿಯಾ 2026 ಕಿರೀಟ ಮುಡಿಗೇರಿಸಿಕೊಂಡಿರುವ ಕಾರವಾರ ಶಾಸಕ ಸತೀಶ್ ಸೈಲ್ ಅವರ ಪುತ್ರಿ ಸಾಧ್ವಿ ಸೈಲ್ ಅವರು ಇಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದರು.ಸದಾಶಿವನಗರದ ನಿವಾಸದಲ್ಲಿ ನಡೆದ ಈ ಭೇಟಿಯ ಸಂದರ್ಭದಲ್ಲಿ, ಡಿ.ಕೆ. ಶಿವಕುಮಾರ್ ಅವರು ಸಾಧ್ವಿ ಸೈಲ್ ಅವರಿಗೆ ಹೂಗುಚ್ಛ ನೀಡಿ, ಮಿಸ್ ಇಂಡಿಯಾ ಸಾಧನೆಯನ್ನು ಶ್ಲಾಘಿಸಿ ಅಭಿನಂದನೆ ಸಲ್ಲಿಸಿದರು.
ನಾಡಿಗೆ ಕೀರ್ತಿ ತರಲಿ:
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಡಿ.ಕೆ. ಶಿವಕುಮಾರ್, "ಫೆಮಿನಾ ಮಿಸ್ ಇಂಡಿಯಾ 2026 ಕಿರೀಟ ಗೆದ್ದ ಸಾಧ್ವಿ ಸೈಲ್ ಅವರು ನನ್ನನ್ನು ಭೇಟಿ ಮಾಡಿದರು. ಈ ವೇಳೆ ಅವರಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದೆ. 2027ರ ಮಿಸ್‌ವರ್ಲ್ಡ್‌ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಅವರು, ಅಲ್ಲಿಯೂ ಗೆಲುವು ಸಾಧಿಸಿ ನಾಡಿಗೆ ಹಾಗೂ ದೇಶಕ್ಕೆ ಮತ್ತಷ್ಟು ಕೀರ್ತಿ ತರುವಂತಾಗಲಿ" ಎಂದು ಆಶಿಸಿದ್ದಾರೆ.
ಶಾಸಕ ಸತೀಶ್ ಸೈಲ್ ಅವರ ಪುತ್ರಿಯಾದ ಸಾಧ್ವಿ ಸೈಲ್, ಇತ್ತೀಚೆಗಷ್ಟೇ ನಡೆದ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಇಂಡಿಯಾ ಪ್ರಶಸ್ತಿ ಗೆಲ್ಲುವ ಮೂಲಕ ರಾಜ್ಯದ ಗಮನ ಸೆಳೆದಿದ್ದರು. ಈಗ ಅವರು ಮುಂದಿನ ಮಿಸ್ ವರ್ಲ್ಡ್ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದಾರೆ.


