ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತ್ಯಾಜ್ಯ ಮುಕ್ತ ಹಾಗೂ ಸುಂದರ ಬೆಂಗಳೂರು ನಿರ್ಮಾಣ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ನಗರದಲ್ಲಿ ಇಂದಿನಿಂದ 'ತ್ಯಾಜ್ಯದಿಂದ ಸ್ವಾತಂತ್ರ್ಯ' ಎಂಬ ವಿಶೇಷ ಅಭಿಯಾನಕ್ಕೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಚಾಲನೆ ನೀಡಿದರು.
ಹೆಬ್ಬಾಳ ಮೇಲ್ಸೇತುವೆ ಸಮೀಪವಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಬಳಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ಸೇರಿ ಈ ಬೃಹತ್ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು.
22,372 ಟನ್ ತ್ಯಾಜ್ಯ ತೆರವು:
ಈ ಅಭಿಯಾನದ ಅಡಿಯಲ್ಲಿ ನಗರದಾದ್ಯಂತ ಬಿದ್ದಿರುವ ಕಟ್ಟಡ ನಿರ್ಮಾಣ ತ್ಯಾಜ್ಯ, ಘನ ತ್ಯಾಜ್ಯ, ಹಳೆಯ ವಿದ್ಯುತ್ ಕಂಬಗಳು, ಪೈಪ್‌ಗಳು, ಮಣ್ಣಿನ ಗುಡ್ಡೆಗಳು, ಬೆಳೆದು ನಿಂತಿರುವ ಕಳೆಗಿಡಗಳು ಹಾಗೂ ಮರದ ಕೊಂಬೆಗಳು ಸೇರಿದಂತೆ ಒಟ್ಟು 22,372 ಟನ್‌ಗಳಷ್ಟು ಬೃಹತ್ ಪ್ರಮಾಣದ ತ್ಯಾಜ್ಯವನ್ನು ತೆರವುಗೊಳಿಸಲು ಯೋಜಿಸಲಾಗಿದೆ.
ಅಭಿಯಾನದ ಕುರಿತು ಮಾತನಾಡಿದ ಸಿಎಂ ಡಿ. ಕೆ. ಶಿವಕುಮಾರ್ ಅವರು, "ನಗರದ ಸ್ವಚ್ಛತೆ, ಸೌಂದರ್ಯೀಕರಣ ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಸರ್ಕಾರ ಮೊದಲ ಆದ್ಯತೆ ನೀಡಿದೆ. ಬೆಂಗಳೂರನ್ನು ತ್ಯಾಜ್ಯ ಮುಕ್ತ ಹಾಗೂ ದೇಶದಲ್ಲೇ ಮಾದರಿ ಮಹಾನಗರವನ್ನಾಗಿ ರೂಪಿಸಲು ನಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ," ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಇಂಧನ ಸಚಿವ ಕೆ. ಜೆ. ಜಾರ್ಜ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಎಸ್. ಆರ್. ವಿಶ್ವನಾಥ್, ಎ. ಸಿ. ಶ್ರೀನಿವಾಸ್, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.



