ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸಾಸಲು ಹೋಬಳಿಯ ಸರ್ಕಾರಿ ಶಾಲೆಗೆ ಭೂಮಿ ದಾನ ನೀಡುವುದು ಶಿಕ್ಷಣದ ಅಭಿವೃದ್ಧಿಗೆ ಮತ್ತು ಸಮಾಜದ ಒಳಿತಿಗೆ ಒಂದು ಶ್ರೇಷ್ಠ ಕಾರ್ಯವಾಗಿದೆ ಎಂದು ಶ್ರೀ ಕೊಂಗಾಡಿಯಪ್ಪ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಶ್ರೀನಿವಾಸ ತಿಳಿಸಿದರು.
ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೋಬಳಿಯ ಕಾಮೇನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಜಮೀನು ದಾನ ಮಾಡಿರುವ ಸಿಂಗ್ರಯ್ಯಗೌಡ ಮತ್ತು ಲಕ್ಷ್ಮಮ್ಮ ದಂಪತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಅಭಿನಂದಿಸಿದ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿ ಶಾಲೆಗೆ ದಾನ ನೀಡುವುದು ಶಿಕ್ಷಣಕ್ಕೆ ನೀಡುವ ಅತ್ಯುತ್ತಮ ಪ್ರೋತ್ಸಾಹವಾಗಿದೆ. ನಮ್ಮ ಮುಂದಿನ ತಲೆಮಾರಿನ ಭವಿಷ್ಯವನ್ನು ರೂಪಿಸುವ ಮಹತ್ಕಾರ್ಯವಾಗಿದೆ. ದಾನಿಗಳು ತಮ್ಮ ಜಮೀನನ್ನು ಶಾಲೆಗಳ ಕಟ್ಟಡ ನಿರ್ಮಾಣ ಅಥವಾ ಆಟದ ಮೈದಾನಕ್ಕಾಗಿ ಉಡುಗರೆಯಾಗಿ ನೀಡುತ್ತಿದ್ದಾರೆ. ಇವರ ದಾನ ಗುಣ ಹಲವಾರು ದಾನಿಗಳಿಗೆ ಮಾದರಿಯಾಗಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ದಾನಿಗಳ ನೆರವು ಅತ್ಯಂತ ಅಗತ್ಯವಾಗಿದೆ. ನಮ್ಮ ಹಿರಿಯರು ಮಕ್ಕಳಿಗೆ ದಾನದ ಮಹತ್ವವನ್ನು ಕಥೆಗಳು, ಒಗಟುಗಳು ಮತ್ತು ತಮ್ಮ ದೈನಂದಿನ ನಡವಳಿಕೆಯ ಮೂಲಕ ಅತ್ಯಂತ ಸರಳವಾಗಿ ತಿಳಿಸುತ್ತಿದ್ದರು. ದಾನ ಮಾಡುವುದರಿಂದ ಮನಸ್ಸಿಗೆ ಅಪಾರವಾದ ನೆಮ್ಮದಿ, ಸಂತೋಷ ಮತ್ತು ನಮ್ರತೆ ಸಿಗುತ್ತದೆ. ಸಮಾಜದ ಜನರಲ್ಲಿ ಸಕಾರಾತ್ಮಕ ಭಾವನೆ ಮೂಡುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಾಸಲು ಹೋಬಳಿ ಘಟಕದ ಅಧ್ಯಕ್ಷ ಜಿ.ಎಂ.ನಾಗರಾಜು, ಕಸಬಾ ಹೋಬಳಿ ಘಟಕದ ಕೋಶಾಧ್ಯಕ್ಷ ಜಿ.ಸುರೇಶ್, ಪದಾಧಿಕಾರಿಗಳಾದ ಕೋದಂಡರಾಮ್, ಅಣ್ಣಯ್ಯ, ಉಪನ್ಯಾಸಕರುಗಳಾದ ಬಿ.ಎನ್.ನರಸಿಂಹಮೂರ್ತಿ, ಎಸ್.ಬೋರಪ್ಪ, ಕಾಮೇನಹಳ್ಳಿ ಶಾಲೆಯ ಶಿಕ್ಷಕ ವೆಂಕಟರಮಣಯ್ಯ, ಗ್ರಾಮಸ್ಥರುಗಳಾದ ರಂಗಸ್ವಾಮಯ್ಯ, ರಾಜಣ್ಣ ಮುಂತಾದವರು ಭಾಗವಹಿಸಿದ್ದರು.




