ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೇವರ ಹೆಸರಿನಲ್ಲಿ ನಂಬಿಕೆಗಳು ಮತ್ತು ವ್ರತಾಚರಣೆಗಳು ಕಾಲದಿಂದಲೂ ನಡೆದುಕೊಂಡು ಬಂದಿರುವುದು ಸಹಜ. ಆದರೆ, ಅದೇ ದೇವರ ಹೆಸರಿನಲ್ಲಿ ಮೌಢ್ಯಗಳನ್ನು ಬಿತ್ತಿ ಅಮಾಯಕ ಬಡ ಜನರನ್ನು ನಂಬಿಸಿ, ಅವರ ಭಕ್ತಿಯನ್ನೇ ಬಲಹೀನತೆಯನ್ನಾಗಿ ಬಳಸಿಕೊಂಡು ಮೋಸ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಇಂತಹ ದುಷ್ಟ ಪದ್ಧತಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ಸ್ವಯಂ-ಘೋಷಿತ ದೇವಮಾನವನೊಬ್ಬನ ಬಂಡವಾಳವನ್ನು ಖ್ಯಾತ ಮೂಢನಂಬಿಕೆ ವಿರೋಧಿ ಹೋರಾಟಗಾರ ಹುಲಿಕಲ್ ನಟರಾಜ್ ವೈಜ್ಞಾನಿಕವಾಗಿ ಬಯಲು ಮಾಡಿದ್ದಾರೆ.
ಸ್ವಯಂ-ಘೋಷಿತ ದೇವಮಾನವನ ಸುಳ್ಳು ಭರವಸೆ ಬಯಲು:
ದೇವನಹಳ್ಳಿಯಲ್ಲಿ ವಾಸಿಸುತ್ತಿದ್ದ ರಾಜಾ ಶ್ರೀನಿವಾಸ ಸನ್ನಿಧಿ ಎಂಬ ಸ್ವಯಂ-ಘೋಷಿತ ದೇವಮಾನವ, ತನಗೆ ಮಹಾಕಾಳಿ ಮೈಮೇಲೆ ಬರುತ್ತಿದ್ದು ಅಪೂರ್ವ ಶಕ್ತಿಗಳಿವೆ ಎಂದು ಪ್ರಚಾರ ಮಾಡಿಕೊಳ್ಳುತ್ತಿದ್ದನು. ಈ ವಿಚಾರ ತಿಳಿದ ಸ್ವದೇಶಿ ಮೀಡಿಯಾದ ಅರವಿಂದ್ ಅವರು ಈ ವ್ಯಕ್ತಿಯನ್ನು ಹುಲಿಕಲ್ ನಟರಾಜ್ ಅವರ ಬಳಿಗೆ ಕರೆತಂದರು.
ರಾಜಾ ಶ್ರೀನಿವಾಸ ಸನ್ನಿಧಿಯವರ ಈ ಅಪೂರ್ವ ಶಕ್ತಿಯನ್ನು ಪರೀಕ್ಷಿಸಲು ಹುಲಿಕಲ್ ನಟರಾಜ್ ಅವರು ಸ್ವತಃ ತಮ್ಮ ಪುತ್ರ ಶರತ್ ಹುಲಿಕಲ್ ಅವರನ್ನೇ ಪರೀಕ್ಷೆಗೆ ಒಡ್ಡಿದರು. ಜುಲೈ 22, 2026ರಂದು ಪ್ರಾರಂಭವಾದ ಈ ಪರೀಕ್ಷೆಯು ಸೆಪ್ಟೆಂಬರ್ 12, 2026ರಂದು ಅಂತಿಮಗೊಂಡಿತು.
ಹಿನ್ನೆಲೆ: ಶರತ್ ಹುಲಿಕಲ್ ಅವರು ಹುಟ್ಟಿನಿಂದಲೇ ದೃಷ್ಟಿ ಮಂದವಾಗಿದ್ದು, ನರಗಳ ದೌರ್ಬಲ್ಯದಿಂದಾಗಿ ಪ್ರಸ್ತುತ ಸಂಪೂರ್ಣ ದೃಷ್ಟಿ ಕಳೆದುಕೊಂಡಿದ್ದಾರೆ.
ದೇವಮಾನವನ ಮಾತು: ರಾಜಾ ಶ್ರೀನಿವಾಸ ಸನ್ನಿಧಿಯು ಕೇವಲ ನಲ್ವತ್ತು ದಿನಗಳಲ್ಲಿ ಶರತ್‌ಗೆ ದೃಷ್ಟಿಯನ್ನು ಮರಳಿ ಬರಿಸುವುದಾಗಿ ದೊಡ್ಡ ಭರವಸೆ ನೀಡಿದ್ದನು.
ವೈದ್ಯಕೀಯ ತಜ್ಞರಿಂದ ಸುಳ್ಳೆಂದು ಸಾಬೀತು:
ನಲ್ವತ್ತು ದಿನಗಳ ನಂತರ ಶರತ್ ಹುಲಿಕಲ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಅವರ ದೃಷ್ಟಿ ಸಮಸ್ಯೆಯಲ್ಲಿ ಯಾವುದೇ ಸುಧಾರಣೆ ಕಂಡುಬರದೆ ಯಥಾಸ್ಥಿತಿ ಮುಂದುವರಿದಿದೆ ಎಂಬುದು ಸ್ಪಷ್ಟವಾಯಿತು.
ವೈದ್ಯರ ಅಭಿಪ್ರಾಯ: ನರರೋಗ ತಜ್ಞ ಡಾ. ಪ್ರಶಾಂತ್ ಹಾಗೂ ನೇತ್ರ ತಜ್ಞ ಡಾ. ಕೆ.ವಿ. ಹರೀಶ್ ಅವರುಗಳು ಶರತ್ ಅವರ ಸ್ಥಿತಿಯನ್ನು ಪರಿಶೀಲಿಸಿ, ರಾಜಾ ಶ್ರೀನಿವಾಸ ಸನ್ನಿಧಿ ಹೇಳಿದ್ದೆಲ್ಲವೂ ಸಂಪೂರ್ಣ ಸುಳ್ಳು ಎಂದು ದೃಢಪಡಿಸಿದರು. ಜಿಲ್ಲಾ ವೈದ್ಯರೂ ಸಹ ಶರತ್‌ಗೆ ಸದ್ಯ ಲಭ್ಯವಿರುವ ಯಾವುದೇ ತಂತ್ರಜ್ಞಾನ ಅಥವಾ ಚಿಕಿತ್ಸೆಯಿಂದ ದೃಷ್ಟಿ ಮರಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನೇತ್ರತಜ್ಞರ ಮಾತು: "ಶರತ್ ಹುಲಿಕಲ್ ನನಗೆ ಬಾಲ್ಯದಿಂದಲೂ ಗೊತ್ತು. ಅವರ ದೃಷ್ಟಿ ಸಂಪೂರ್ಣ ನಷ್ಟವಾಗುವುದನ್ನು ತಡೆಯಲು ವೈದ್ಯ ವಿಜ್ಞಾನದಲ್ಲೂ ಸಾಧ್ಯವಿಲ್ಲ. ಈ ಪ್ರಯೋಗವು ಯಾವುದೇ ವೈದ್ಯಕೀಯ ಚಿಕಿತ್ಸೆಯಲ್ಲದೆ ಕೇವಲ ಮೂಢನಂಬಿಕೆಯನ್ನು ಅವಲಂಬಿಸಿದ ಕಾರ್ಯವಾಗಿತ್ತು. ನಾವು ಯಾವುದೇ ರೋಗಕ್ಕೆ ವೈದ್ಯಕೀಯ ಚಿಕಿತ್ಸೆಯನ್ನು ನಂಬಬೇಕೆ ಹೊರತು ಅಂಧವಿಶ್ವಾಸಗಳನ್ನಲ್ಲ" ಎಂದು ಡಾ. ಕೆ.ವಿ. ಹರೀಶ್ ತಿಳಿಸಿದ್ದಾರೆ.
ಕಾಯ್ದೆಗಳ ಉಲ್ಲಂಘನೆ ಮತ್ತು ಕಾನೂನು ಕ್ರಮದ ಎಚ್ಚರಿಕೆ:
ಈ ಘಟನೆಯು ವೈಜ್ಞಾನಿಕ ಅರಿವಿಗೆ ಮೀರಿದ ಪವಾಡಗಳು ಮನುಷ್ಯ ಮಾತ್ರದಿಂದ ಸಾಧ್ಯವಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಕಳೆದ ನಲ್ವತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ಅಂಧವಿಶ್ವಾಸಗಳ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಹುಲಿಕಲ್ ನಟರಾಜ್ ಅವರಿಗೆ ಮತ್ತೊಮ್ಮೆ ಗೆಲುವು ದೊರೆತಿದೆ.
ಪ್ರಕರಣದ ಕುರಿತು ಶರತ್ ಹುಲಿಕಲ್: "ಇದು ಕೇವಲ ಪ್ರಯೋಗವಷ್ಟೇ. ನನ್ನ ತಂದೆಯವರ ವೈಜ್ಞಾನಿಕ ಅನ್ವೇಷಣೆಯಲ್ಲಿ ಇದೂ ಒಂದು ಹೆಜ್ಜೆ. ಈ ಪ್ರಯೋಗ ವಿಫಲವಾಗುತ್ತದೆ ಎಂಬ ಅನುಮಾನ ನನಗೆ ಮೊದಲೇ ಇತ್ತು, ಅದು ಈಗ ಸಾಬೀತುಗೊಂಡಿದೆ. ವಿಕಲಚೇತನರ ಹಕ್ಕು ಕಾಯ್ದೆ, 2016ರ ಪ್ರಕಾರ ಇದು ಶಿಕ್ಷಾರ್ಹ ಅಪರಾಧವಾಗಿದೆ."
ವಕೀಲರಾದ ಗೋವರ್ಧನ್ ಸಿ. (ಫೌಂಡರ್ ಲಾ ಪೀಪಲ್ ಟ್ರಸ್ಟ್): "ಅಮಾನವೀಯ ದುಷ್ಟಪದ್ಧತಿಗಳು ಮತ್ತು ವಾಮಾಚಾರ ಪ್ರತಿಬಂಧಕ ನಿರ್ಮೂಲನಾ ಕಾಯ್ದೆ, 2017ರ ಅಡಿಯಲ್ಲಿ ದೇವರು ಅಥವಾ ದೆವ್ವ ಮೈಮೇಲೆ ಬರುತ್ತದೆ ಎಂದು ಸುಳ್ಳು ಆಶ್ವಾಸನೆ ನೀಡಿ ವಂಚಿಸುವುದು ಅಪರಾಧವಾಗಿದೆ. ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 318ರ ಅಡಿಯಲ್ಲಿ ಇದು ಮೋಸ ಮತ್ತು ವಂಚನೆ ಪ್ರಕರಣವಾಗಿದ್ದು, ಇಂತಹ ವ್ಯಕ್ತಿಗಳು ಕಠಿಣ ಶಿಕ್ಷೆಗೆ ಗುರಿಯಾಗಲು ಅರ್ಹರು."
ಸಾರ್ವಜನಿಕರಿಗೆ ಹುಲಿಕಲ್ ನಟರಾಜ್ ಸಂದೇಶ:
ತಮ್ಮ ಪುತ್ರನನ್ನು ಈ ಪರೀಕ್ಷೆಗೆ ಒಳಪಡಿಸಿದ ಹುಲಿಕಲ್ ನಟರಾಜ್ ಮಾತನಾಡಿ, "ಯಾವುದೇ ವಿಷಯವನ್ನು ಕುರುಡಾಗಿ ಪ್ರಶ್ನಿಸದೆ ನಂಬಬಾರದು ಎಂದು ಈ ಪ್ರಕರಣ ತೋರಿಸಿಕೊಟ್ಟಿದೆ. ಇಂತಹ ಅಸಂಖ್ಯ ಜನರು ಲಕ್ಷಾಂತರ ಮಂದಿಗೆ ಇನ್ನೂ ಮಂಕುಬೂದಿ ಎರಚುತ್ತಿದ್ದಾರೆ. ಸಾರ್ವಜನಿಕರಲ್ಲಿ ನನ್ನ ವಿನಂತಿ ಏನೆಂದರೆ, ಪವಾಡ ಎಂದು ಅನಿಸಿದಾಗಲೆಲ್ಲಾ ಅದರ ಹಿಂದಿನ ವೈಜ್ಞಾನಿಕತೆಯನ್ನು ಅರಿಯಲು ಪ್ರಯತ್ನಿಸಿ. ದೇವರು ಮೈಮೇಲೆ ಬರುವುದು ಸಂಪೂರ್ಣ ಅಸತ್ಯ" ಎಂದು ಎಚ್ಚರಿಸಿದ್ದಾರೆ.




