ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ಯಾರೂ ಕೂಡ ಅಧಿಕಾರಿಗಳ ಮೇಲೆ ಕೈ ಮಾಡಬೇಡಿ. ತಾಯಂದಿರು ಅಧಿಕಾರಿಗಳಿಗೆ ಪೊರಕೆಯಿಂದ ಹೊಡೆಯುವ ಅವಶ್ಯಕತೆ ಇಲ್ಲ, ಬೇಕಾದರೆ ನನಗೆ ಹೊಡೆಯಲಿ. ನಾನು ಹೊಡಿಸಿಕೊಳ್ಳುವುದಕ್ಕೆ ಸಿದ್ಧನಿದ್ದೇನೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅತ್ಯಂತ ಭಾವುಕರಾಗಿ ಹೇಳಿದ್ದಾರೆ.
ಬಿಡದಿ ಟೌನ್‌ಶಿಪ್ ನಿರ್ಮಾಣದ ಹಿನ್ನೆಲೆಯಲ್ಲಿ ಜಮೀನು ಸರ್ವೆ ಮಾಡಲು ಹೋಗಿದ್ದ ಅಧಿಕಾರಿಗಳ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವಿಷಯವಾಗಿ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು.
ಮನಸ್ಸಿಗೆ ನೋವು ತಂದ ಘಟನೆ:
"ಬಿಡದಿಯಲ್ಲಿ ಅಧಿಕಾರಿಗಳ ಮೇಲೆ ನಡೆದ ಘಟನೆಯಿಂದ ನನ್ನ ಮನಸ್ಸಿಗೆ ತೀವ್ರ ನೋವಾಗಿದೆ. ಅಲ್ಲಿನ ಜನರಿಗೆ ನಾನು ಕೈ ಮುಗಿದು ಕೇಳಿಕೊಳ್ಳುತ್ತೇನೆ, ಅಧಿಕಾರಿಗಳು ಕೇವಲ ಸರ್ಕಾರದ ಕರ್ತವ್ಯದ ಮೇರೆಗೆ ಅಲ್ಲಿಗೆ ಹೋಗಿರುತ್ತಾರೆ. ಅವರ ಮೇಲೆ ಕೋಪ ತೋರಿಸುವ ಅಗತ್ಯವಿಲ್ಲ. ನಿಮಗೆ ಅಸಮಾಧಾನವಿದ್ದರೆ ನನ್ನ ಮೇಲೆ ಆಕ್ರೋಶ ಹೊರಹಾಕಿ, ಬೇಕಿದ್ದರೆ ನನಗೆ ಹೊಡೆಯಿರಿ" ಎಂದು ಮುಖ್ಯಮಂತ್ರಿಗಳು ಹೇಳಿದರು.
ಬಲವಂತದ ಭೂಸ್ವಾಧೀನ ಇಲ್ಲ:
ಇದೇ ವೇಳೆ ರೈತರ ಆತಂಕ ನಿವಾರಿಸಲು ಯತ್ನಿಸಿದ ಸಿಎಂ, "ರೈತರಿಂದ ಬಲವಂತವಾಗಿ ಜಮೀನು ಕಿತ್ತುಕೊಳ್ಳುವ ಯಾವುದೇ ಉದ್ದೇಶ ನಮ್ಮ ಸರ್ಕಾರಕ್ಕಿಲ್ಲ. ಬಲವಂತದ ಭೂಸ್ವಾಧೀನಕ್ಕೆ ನಾವು ಕೈ ಹಾಕುವುದಿಲ್ಲ. ಕೇವಲ ಸರ್ವೆ ಕಾರ್ಯ ನಡೆಸಲು ಹೋದ ಅಧಿಕಾರಿಗಳ ಮೇಲೆ ಈ ರೀತಿ ಹಲ್ಲೆ ನಡೆಸಿರುವುದು ಸರಿಯಲ್ಲ" ಎಂದು ಸ್ಪಷ್ಟಪಡಿಸಿದರು.



