ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವರದಕ್ಷಿಣೆ ಕಿರುಕುಳ ಹಾಗೂ ಕ್ರೌರ್ಯ ಎಸಗಿರುವ ಪತಿ ತನಿಖೆಗೆ ಹಾಜರಾಗದೇ ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆಯಿದೆ ಎಂಬ ಪತ್ನಿಯ ಮನವಿಯನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್, ಆಕೆಯ ಪತಿಯ ವಿರುದ್ಧ ‘ಲುಕ್ ಔಟ್ ಸರ್ಕ್ಯುಲರ್’ ಹೊರಡಿಸುವಂತೆ ಪೊಲೀಸರಿಗೆ ಸೂಚಿಸಿದೆ.
‘ಲುಕ್ ಔಟ್ ಸರ್ಕ್ಯುಲರ್’ ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತರಾಮನಾಥ್‌ಹೆಗಡೆ ಅವರಿದ್ದ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದೆ.
ಪ್ರಕರಣದ ಪ್ರತಿವಾದಿಗಳಾದ ರಾಜ್ಯ ಪ್ರಾಸಿಕ್ಯೂಷನ್ ಮತ್ತು ತನಿಖಾಧಿಕಾರಿಗೆ ನೋಟಿಸ್ ಜಾರಿಗೊಳಿಸಿರುವ ನ್ಯಾಯಪೀಠ, ವಿಚಾರಣೆಯನ್ನು ನವೆಂಬರ್ 17ಕ್ಕೆ ಮುಂದೂಡಿದೆ.
ನ್ಯಾಯಪೀಠದ ಅಭಿಪ್ರಾಯ: “ಈ ಪ್ರಕರಣವು ಕೇವಲ ಸಾಲ ವಸೂಲಾತಿಗೆ ಸಂಬಂಧಿಸಿದ್ದಲ್ಲ, ಬದಲಿಗೆ ಪತಿಯ ವಿರುದ್ಧ ಗಂಭೀರ ಸ್ವರೂಪದ ಕ್ರಿಮಿನಲ್ ಅಪರಾಧ ಆರೋಪಗಳಿವೆ. ಪತಿಯು ದೇಶ ಬಿಟ್ಟು ಪರಾರಿಯಾಗುವ ಸಾಧ್ಯತೆ ಇರುವುದರಿಂದ ತನಿಖೆಗೆ ಹಾಜರಾಗದೆ ಇರಬಹುದು. ಆದ್ದರಿಂದ ಲುಕ್ಔಟ್ ಸರ್ಕ್ಯುಲರ್ ಜಾರಿಗೊಳಿಸುವುದು ಅನಿವಾರ್ಯವಿದೆ. ಒಂದು ವೇಳೆ ಈ ಆದೇಶದಿಂದ ಪತಿಗೆ ತೊಂದರೆಯಾಗಿದ್ದಲ್ಲಿ, ಅವರು ಕಾನೂನುಬದ್ಧವಾಗಿ ಈ ಅರ್ಜಿಯಲ್ಲಿ ಪಾಲ್ಗೊಂಡು ತಮ್ಮ ವಾದ ಮಂಡಿಸಲು ಅವಕಾಶವಿರುತ್ತದೆ” ಎಂದು ಪೀಠ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ: ಪತಿ–ಪತ್ನಿ ನಡುವಿನ ಮನಸ್ತಾಪದ ಹಿನ್ನೆಲೆಯಲ್ಲಿ, ಪತಿಯ ವಿರುದ್ಧ ದೈಹಿಕ, ಮಾನಸಿಕ, ಆರ್ಥಿಕ ಕ್ರೌರ್ಯ ಹಾಗೂ ಕಾನೂನುಬಾಹಿರ ವರದಕ್ಷಿಣೆ ಬೇಡಿಕೆಗಳ ಆರೋಪದಡಿ 2026ರ ಸೆಪ್ಟೆಂಬರ್ 30ರಂದು ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರನ್ನಾಧರಿಸಿ ಪೊಲೀಸರು ಭಾರತೀಯ ನ್ಯಾಯ ಸಂಹಿತಾ–2023ರ (BNS) ಕಲಂ 85, 352 ಮತ್ತು 351(2) ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆ–1961ರ ಕಲಂ 3 ಮತ್ತು 4ರ ಅಡಿಯಲ್ಲಿ ಪತಿ ಹಾಗೂ ಅತ್ತೆಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
“ನನ್ನ ಪತಿ ಕಳೆದ ಮೂರು ವರ್ಷಗಳಿಂದ ಫ್ರಾನ್ಸ್‌ನಲ್ಲಿ ಉದ್ಯೋಗದಲ್ಲಿದ್ದು, ದೀರ್ಘಕಾಲದ ಫ್ರೆಂಚ್ ನಿವಾಸದ ಪರವಾನಗಿಯನ್ನೂ ಹೊಂದಿದ್ದಾರೆ. ಸದ್ಯ ಭಾರತದಲ್ಲಿರುವ ಅವರು, ನಾನು ಎಫ್‌ಐಆರ್ ದಾಖಲಿಸುತ್ತಿದ್ದಂತೆಯೇ ತನಿಖೆಗೆ ಸಹಕರಿಸದೆ ತಪ್ಪಿಸಿಕೊಂಡು ಫ್ರಾನ್ಸ್‌ಗೆ ಪಲಾಯನ ಮಾಡಲು ಹೊಂಚು ಹಾಕುತ್ತಿದ್ದಾರೆ. ಆದ್ದರಿಂದ ಅವರು ದೇಶ ಬಿಟ್ಟು ತೆರಳದಂತೆ ತಡೆಯಲು ಎಲ್‌ಒಸಿ ಜಾರಿಗೊಳಿಸಬೇಕು” ಎಂದು ಪತ್ನಿ ಕೋರಿದ್ದರು. ಆದರೆ, ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಈ ಮನವಿಯನ್ನು ತಿರಸ್ಕರಿಸಿದ್ದರಿಂದ ಅವರು ಹೈಕೋರ್ಟ್‌ನ ಮೆಟ್ಟಿಲೇರಿದ್ದರು.



