ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಸಿ.ಕೆ.ಪುರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬ್ರಷ್, ಪೇಸ್ಟ್ ಮತ್ತು ಟಂಗ್ ಕ್ಲೀನರ್ ಮತ್ತು ಸಿಹಿ ವಿತರಿಸುವ ಮೂಲಕ ದಂತ ವೈದ್ಯೆ ಪೂರ್ಣಿಮರವರು ತಮ್ಮ ೫೦ ನೇ ವರ್ಷದ ಹುಟ್ಟುಹಬ್ಬವನ್ನು ಸೋಮವಾರ ಸರಳವಾಗಿ ಆಚರಿಸಿಕೊಂಡರು.
ದಿನಕ್ಕೆ ಕನಿಷ್ಟ ಎರಡು ಬಾರಿ ಹಲ್ಲು ಉಜ್ಜಬೇಕು. ಮೂರು ಬಾರಿಗಿಂತ ಹೆಚ್ಚು ಉಜ್ಜಬಾರದು. ಮೃದುವಾಗಿ ಹಲ್ಲು ಉಜ್ಜಬೇಕು. ಒರಟಾಗಿ ಉಜ್ಜುವುದರಿಂದ ವಸಡಿಗೆ ಹಾನಿಯಾಗುತ್ತದೆ. ಎರಡು ನಿಮಿಷಗಳ ಕಾಲ ಹಲ್ಲು ಉಜ್ಜಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಟೂತ್ ಬ್ರಷ್ ಬದಲಾಯಿಸಬೇಕೆಂದು ಮಕ್ಕಳಿಗೆ ತಿಳಿಸಿದರು.
ಸಿಹಿ ಪದಾರ್ಥವನ್ನು ತಿಂದ ಕೂಡಲೆ ನೀರಿನಿಂದ ಬಾಯಿ ಮುಕ್ಕಳಿಸಬೇಕು. ಇಲ್ಲವಾದಲ್ಲಿ ಹಲ್ಲು ಹುಳುಕಾಗುತ್ತದೆ. ಹಾಗಾಗಿ ಹಲ್ಲಿನ ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದು ಮಕ್ಕಳಿಗೆ ಡಾ.ಪೂರ್ಣಿಮ ಮನವರಿಕೆ ಮಾಡಿದರು.
ಶಾಲೆಯ ಮುಖ್ಯ ಶಿಕ್ಷಕಿ ಪಿ.ಮಂಜುಳ, ಶಿಕ್ಷಕಿಯರುಗಳಾದ ಹೆಚ್.ರತ್ನಮ್ಮ, ಎ.ಮಂಜುಳ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದು, ಡಾ.ಪೂರ್ಣಿಮರವರಿಗೆ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರಿದರು.



