ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ತಾಲೂಕಿನ ಆಲೂರುದುದ್ದನಹಳ್ಳಿ ಮಾರುತಿ ವಿದ್ಯಾ ಮಂದಿರ (ಎಂವಿಎಂ) ಶಾಲೆಯಲ್ಲಿ ದಸರಾ ಹಬ್ಬಕ್ಕೆ ಪೌರಾಣಿಕ ಪರಂಪರೆಯನ್ನು ಪ್ರತಿಬಿಂಬಿಸುವ ವೈಭವದ ಗೊಂಬೆಗಳ ಜೋಡಣೆ ಪ್ರದರ್ಶನ ಮಾಡಲಾಗಿದೆ.
ಪೌರಾಣಿಕ ಕಥೆಗಳನ್ನು ಸಾರುವ ಶ್ರೀರಾಮನ ಜೀವನಗಾಥೆ, ಶ್ರೀಕೃಷ್ಣನ ಲೀಲೆಗಳು, ಮೈಸೂರು ದಸರಾ ವೈಭವ ಸೇರಿದಂತೆ ಹಿಂದಿನ ಕಾಲದ ಸಾಂಸ್ಕೃತಿಕ ಸನ್ನಿವೇಶಗಳನ್ನು ಗೊಂಬೆಗಳ ಮೂಲಕ ಸುಂದರವಾಗಿ ಅನಾವರಣಗೊಳಿಸಲಾಗಿದೆ. ಸಾರ್ವಜನಿಕರಿಗೆ ಭಾನುವಾರದಿಂದ ಗೊಂಬೆ ಪ್ರದರ್ಶನವನ್ನು ವೀಕ್ಷಿಸಲು ಮುಕ್ತವಾಗಿ ಆಡಳಿತ ಮಂಡಳಿ ಅವಕಾಶ ಕಲ್ಪಿಸಿದೆ.
ಈ ಕುರಿತು ಶಾಲೆಯ ಕಾರ್ಯದರ್ಶಿ ಗೌರವ್ ಮಾತನಾಡಿ,ನಮ್ಮ ನಾಡಿನ ಸಂಸ್ಕೃತಿ, ಸಂಪ್ರದಾಯ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಇಂತಹ ಕಾರ್ಯಕ್ರಮಗಳ ಮುಖ್ಯ ಉದ್ದೇಶವಾಗಿದೆ. ಮಕ್ಕಳಿಗೆ ಪೌರಾಣಿಕ ಕಥೆಗಳು ಹಾಗೂ ಹಬ್ಬಗಳ ಮಹತ್ವವನ್ನು ತಿಳಿಸುವುದರ ಜತೆಗೆ, ಭಾರತೀಯ ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿಸಲು ಇಂತಹ ಆಚರಣೆಗಳು ಸಹಕಾರಿಯಾಗುತ್ತವೆ. ಈ ನಿಟ್ಟಿನಲ್ಲಿ ಶಾಲೆಯಲ್ಲಿ ಪ್ರತಿವರ್ಷ ದಸರಾ ಹಬ್ಬದ ಅಂಗವಾಗಿ ಗೊಂಬೆಗಳ ಪ್ರದರ್ಶನ ಆಯೋಜಿಸಿಕೊಂಡು ಬರಲಾಗುತ್ತಿದೆ. ಪೋಷಕರು ತಮ್ಮ ಅಕ್ಕಪಕ್ಕದವರಿಗೂ ಶಾಲಾ ಭೇಟಿ ಮಾಡಿ, ಗೊಂಬೆ ಪ್ರದರ್ಶನದ ಸೊಬಗನ್ನು ಕಣ್ತುಂಬಿಕೊಳ್ಳಬೇಕು ಎಂದು ಮನವಿ ಮಾಡಿದರು.
ಶಾಲೆಯ ದಸರಾ ಹಬ್ಬದಲ್ಲಿ ಸಾಮಾನ್ಯವಾಗಿ ಗೊಂಬೆಗಳನ್ನು ಕೂರಿಸುವ ಸಂಪ್ರದಾಯ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಈ ಆಚರಣೆಯ ಮೂಲಕ ಮಕ್ಕಳಿಗೆ ಡಿಜಿಟಲ್ ಯುಗದಿಂದ ಮೊಬೈಲ್ ಗೀಳಿನಿಂದ ವಿರಾಮ ಪಡೆಯಲು ಮತ್ತು ಪೌರಾಣಿಕ ಕಥೆಗಳು, ಧಾರ್ಮಿಕ ಆಚರಣೆಗಳು ಹಾಗೂ ನಾಡಿನ ಪರಂಪರೆಯ ಪರಿಚಯ ಮಾಡಿಕೊಡುವ ಪ್ರಯತ್ನ ಶಾಲೆಯಿಂದ ಮಾಡಲಾಗಿದೆ. ಇಂತಹ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಸೃಜನಶೀಲತೆ, ಕಲಾಸಕ್ತಿ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ಗೌರವ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಆಡಳಿತ ಮಂಡಳಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ವೇಳೆ ಶಾಲೆಯ ಮುಖ್ಯಶಿಕ್ಷಕ ರಾಘವೇಂದ್ರ, ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




