ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿ ಬಜೆಟ್ ಮೀರಿ ಯೋಜನೆಗಳ ಕಾಮಗಾರಿಗಳನ್ನು ಪ್ರಾರಂಭಿಸಲಾಗಿತ್ತು. ಬಿಜೆಪಿ ಸರ್ಕಾರದ ಇಂತಹ ಆರ್ಥಿಕ ಅನಾಹುತಗಳಿಂದಾಗಿಯೇ ಇಂದು ಆರ್ಥಿಕ ಇಲಾಖೆಯವರು ನಮಗೆ ಪತ್ರ ಬರೆದಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರವಾಗಿ ವಾಗ್ದಾಳಿ ನಡೆಸಿದರು.
ಚಾಮರಾಜನಗರ ಜಿಲ್ಲೆಯ ಹನೂರಿನ ಕೆಎಚ್‌ಬಿ ಹೆಲಿಪ್ಯಾಡ್ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಪ್ರಮುಖ ರಾಜಕೀಯ ಬೆಳವಣಿಗೆಗಳು, ಗುತ್ತಿಗೆದಾರರ ಸಮಸ್ಯೆಗಳು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಕುರಿತು ಪ್ರಮುಖ ಸ್ಪಷ್ಟನೆಗಳನ್ನು ನೀಡಿದರು.
ಗುತ್ತಿಗೆದಾರರ ಬಿಲ್ ಬಾಕಿ ವಿಚಾರ: 30 ಸಾವಿರ ಕೋಟಿಗೂ ಅಧಿಕ ಹಣ ಬಿಡುಗಡೆಯಾಗಿಲ್ಲ ಎಂಬ ಗುತ್ತಿಗೆದಾರರ ಪತ್ರದ ಕುರಿತು ಪ್ರತಿಕ್ರಿಯಿಸಿ, "ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿ ನೀಡಿದ ಕೆಲಸಗಳು ಈಗ ಮುಗಿಯುತ್ತಿದ್ದು, ಬಿಲ್ ನೀಡಬೇಕಾಗಿದೆ. ಗುತ್ತಿಗೆದಾರರು ಉಳಿಯಬೇಕು, ಹೀಗಾಗಿ ನಾನು ಇದರ ಬಗ್ಗೆ ಆಲೋಚನೆ ಮಾಡಿ ಶೀಘ್ರದಲ್ಲೇ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ" ಎಂದರು.
ಪರ್ಸೆಂಟೇಜ್ ಕಮಿಷನ್ ಆರೋಪ: ಈಗಲೂ ಗುತ್ತಿಗೆದಾರರಿಗೆ ಕಮಿಷನ್ ಬೇಡಿಕೆ ಇಡಲಾಗುತ್ತಿದೆ ಎಂಬ ಗುತ್ತಿಗೆದಾರರ ಸಂಘದ ಅಧ್ಯಕ್ಷರ ಆರೋಪಕ್ಕೆ ತಿರುಗೇಟು ನೀಡಿದ ಅವರು, "ಅವರು ಈ ಬಗ್ಗೆ ಅಫಿಡವಿಟ್ ಸಲ್ಲಿಸಲಿ, ಕೂಲಂಕಷವಾಗಿ ತನಿಖೆ ಮಾಡಿಸಲಾಗುವುದು" ಎಂದು ಸವಾಲುಹಾಕಿದರು.
ನೀರಾವರಿ ಯೋಜನೆ ಹಾಗೂ ತಿದ್ದುಪಡಿಗಳು: 490 ಕೋಟಿ ರೂ. ಮೊತ್ತದ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ಯಾವಾಗ ಎಂಬ ಪ್ರಶ್ನೆಗೆ, ಇದು ಸಚಿವ ಸಂಪುಟ, ವಿವಿಧ ಸಮಿತಿಗಳು ಹಾಗೂ ಮಂಡಳಿಗಳಲ್ಲಿ ಚರ್ಚೆಯಾಗಿ ಕಾನೂನುಬದ್ಧ ಅನುಮತಿ ಪಡೆದು ಟೆಂಡರ್ ಕರೆಯುವ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು. ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ರದ್ದುಪಡಿಸುವಂತೆ ಬಿ.ಆರ್. ಪಾಟೀಲ್ ಅವರು ರಾಹುಲ್ ಗಾಂಧಿ ಅವರಿಗೆ ಬರೆದ ಪತ್ರದ ಬಗ್ಗೆ ಪರಿಶೀಲನೆ ಮಾಡುವುದಾಗಿ ಹೇಳಿದರು.
ಗೃಹಲಕ್ಷ್ಮಿ ಯೋಜನೆ ಮರುಪರಿಶೀಲನೆ: ಹೊರ ರಾಜ್ಯದವರು ಅನರ್ಹವಾಗಿ ಯೋಜನೆ ಪಡೆದುಕೊಳ್ಳುತ್ತಿರುವುದನ್ನು ತಡೆಯಲು ಹೊಸ ಅರ್ಜಿಗಳನ್ನು ಸಿದ್ಧಪಡಿಸಲಾಗುತ್ತಿದ್ದು, ನೈಜ ಮತದಾರರು ಹಾಗೂ ಅರ್ಹರನ್ನು ಮಾತ್ರ ಪರಿಗಣಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಸದ್ಯಕ್ಕೆ ಯಾವುದೇ ಮರುಪರಿಶೀಲನೆ ಅರ್ಜಿಗಳನ್ನು ವಿತರಣೆ ಮಾಡಿಲ್ಲ ಎಂದರು.
ಚುನಾವಣಾ ಆಯೋಗದ ಕಾರ್ಯವೈಖರಿ ವಿರುದ್ಧ ಆಕ್ರೋಶ: ಚುನಾವಣಾ ಆಯೋಗವು ಪ್ರಜಾಸತಾತ್ಮಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಡಿ.ಕೆ. ಶಿವಕುಮಾರ್, ಜನರ ಭಾವನೆಗಳು ಹಾಗೂ ಬಡವರು, ಅಲ್ಪಸಂಖ್ಯಾತರ ಮತದಾನದ ಹಕ್ಕನ್ನು ಕಸಿಯುವ ಹುನ್ನಾರ ನಡೆಯುತ್ತಿದೆ. ಇದರ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ತಿಳಿಸಿದರು.
ಚಾಮರಾಜನಗರದ ನಂಟು: ಚಾಮರಾಜನಗರ ತಮಗೆ ಅತ್ಯಂತ ಪ್ರಿಯವಾದ ಸ್ಥಳವಾಗಿದ್ದು, ಮಲೆ ಮಹಾದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟ ಹಾಗೂ ಗೋಪಾಲಸ್ವಾಮಿ ಬೆಟ್ಟಗಳ ವಿಶೇಷತೆ ಮತ್ತು ಅಲ್ಲಿನ ಶ್ರಮಜೀವಿ ಜನರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಲೆ ಮಹಾದೇಶ್ವರ ಬೆಟ್ಟದಲ್ಲಿ ವಿಶೇಷ ಸಂಪುಟ ಸಭೆ ನಡೆಸಿ ನೀರಾವರಿ ಸೇರಿದಂತೆ ಅನೇಕ ಅಭಿವೃದ್ಧಿ ಘೋಷಣೆಗಳನ್ನು ಮಾಡಿದ್ದನ್ನು ನೆನಪಿಸಿಕೊಂಡರು.
ಕಾಂಗ್ರೆಸ್ ಪಕ್ಷದ ಯಾತ್ರೆ: ಶಿಕಾರಿಪುರದಿಂದ ಆರಂಭವಾಗುವ ಕಾಂಗ್ರೆಸ್ ಪಕ್ಷದ ಯಾತ್ರೆಯ ಕುರಿತು ಮಾತನಾಡಿ, ಹರಿಪ್ರಸಾದ್ ಅವರು ಪಕ್ಷದ ಸಂಘಟನೆಗಾಗಿ ಈ ಯಾತ್ರೆ ಹಮ್ಮಿಕೊಂಡಿದ್ದಾರೆ. ರಾಹುಲ್ ಗಾಂಧಿಯವರ 'ಭಾರತ ಜೋಡೋ' ನೆನಪಿನಲ್ಲಿ ರಾಜ್ಯ ಅಧ್ಯಕ್ಷರು ಈ ಕಾರ್ಯಕ್ರಮ ರೂಪಿಸಿದ್ದಾರೆ ಎಂದು ತಿಳಿಸಿದರು.




