ಚಂದ್ರವಳ್ಳಿ ನ್ಯೂಸ್, ಕಾರವಾರ:
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ತಟ್ಟೆಹಕ್ಕಲು ಕಡಲ ತೀರದಲ್ಲಿ ಕಪ್ಪೆಚಿಪ್ಪು ತರಲು ಹೋದ ಒಂದೇ ಕುಟುಂಬದ ಎಂಟು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಅತ್ಯಂತ ದುರದೃಷ್ಟಕರ ಘಟನೆ ನಡೆದಿದೆ.
ಈ ಭೀಕರ ದುರಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಕಳವಳ ಮತ್ತು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಮುಖ್ಯಮಂತ್ರಿಗಳ ಕಳವಳ ಮತ್ತು ಪರಿಹಾರ ಘೋಷಣೆ-
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿಗಳು, "ಭಟ್ಕಳ ಸಮೀಪದ ತಟ್ಟೆಹಕ್ಕಲು ಕಡಲ ತೀರದಲ್ಲಿ ಕಪ್ಪೆಚಿಪ್ಪು ತರಲು ಹೋದವರ ಪೈಕಿ ಒಂದೇ ಕುಟುಂಬದ ಎಂಟು ಮಂದಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ ಸುದ್ದಿ ತಿಳಿದು ಸಂಕಟವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಕಂಬನಿ ಮಿಡಿದಿದ್ದಾರೆ.
"ಇದೊಂದು ಅತ್ಯಂತ ದುರದೃಷ್ಟಕರ ಮತ್ತು ನೋವಿನ ಘಟನೆ. ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು."
ಸಿದ್ದರಾಮಯ್ಯ, ಮುಖ್ಯಮಂತ್ರಿ.
ಕಾಣೆಯಾದವರಿಗಾಗಿ ತೀವ್ರ ಹುಡುಕಾಟ-
ಈ ದುರ್ಘಟನೆಯಲ್ಲಿ ಇನ್ನೂ ಕೆಲವರು ಕಾಣೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಅವರಿಗಾಗಿ ಕಡಲ ತೀರದಲ್ಲಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. "ಕಾಣೆಯಾದವರು ಬದುಕಿಬಂದು ತಮ್ಮವರನ್ನು ಕೂಡಿಕೊಳ್ಳಲಿ ಎಂದು ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸೋಣ" ಎಂದು ಸಿಎಂ ಸಿದ್ದರಾಮಯ್ಯ ಅವರು ಆಶಿಸಿದ್ದಾರೆ.
ಸ್ಥಳದಲ್ಲಿ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದು, ದುರಂತದ ಹಿನ್ನೆಲೆಯಲ್ಲಿ ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.



