ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ 20ನೇ ಆವೃತ್ತಿಯ 'ರೋಜ್ಗಾರ್ ಮೇಳ'ದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ವರ್ಚುವಲ್ ಆಗಿ ಭಾಗವಹಿಸಿದರು. ಬಳಿಕ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಿ ಶುಭ ಹಾರೈಸಿದರು.
ಯುವ ಜನತೆಗೆ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಪಾಲುದಾರರನ್ನಾಗಿ ಮಾಡುವ ಪ್ರಧಾನಿಯವರ ಬದ್ಧತೆಗೆ ರೋಜ್ಗಾರ್ ಮೇಳ ಒಂದು ಪ್ರಬಲ ಪ್ರತಿಫಲವಾಗಿದೆ ಎಂದು ಅವರು ಪ್ರಶಂಸಿಸಿದರು.
ದೇಶಾದ್ಯಂತ 51 ಸಾವಿರಕ್ಕೂ ಅಧಿಕ ಯುವಕರಿಗೆ ನೇಮಕಾತಿ ಪತ್ರ:
ಕರ್ನಾಟಕ ಸೇರಿದಂತೆ ದೇಶದ 45 ವಿವಿಧ ಸ್ಥಳಗಳಲ್ಲಿ ಇಂದು 51,000ಕ್ಕೂ ಹೆಚ್ಚು ಯುವ ಭಾರತೀಯರಿಗೆ ನೇಮಕಾತಿ ಪತ್ರಗಳನ್ನು ನೀಡಲಾಗಿದೆ. ಈ ಆವೃತ್ತಿಯೊಂದಿಗೆ, ದೇಶಾದ್ಯಂತ ಯುವಕರಿಗೆ ವಿತರಿಸಲಾದ ಒಟ್ಟು ನೇಮಕಾತಿ ಪತ್ರಗಳ ಸಂಖ್ಯೆ ಸರಿಸುಮಾರು 12.75 ಲಕ್ಷದ ಮೈಲಿಗಲ್ಲನ್ನು ದಾಟಿದೆ ಎಂದು ಸಚಿವರು ತಿಳಿಸಿದರು.
ರಾಷ್ಟ್ರ ನಿರ್ಮಾಣಕ್ಕೆ ಹೊಸ ಚೈತನ್ಯ: ಇಂದಿನ ದಿನಗಳಲ್ಲಿ ಸಾರ್ವಜನಿಕ ಸೇವೆಗೆ ಕಾಲಿಡುತ್ತಿರುವ ಪ್ರತಿಯೊಬ್ಬ ಯುವಕರೂ ರಾಷ್ಟ್ರ ನಿರ್ಮಾಣಕ್ಕೆ ಹೊಸ ಶಕ್ತಿ, ಪ್ರತಿಭೆ ಹಾಗೂ ಬದ್ಧತೆಯನ್ನು ತರುತ್ತಾರೆ. ಈ ಸ್ಪೂರ್ತಿಯೇ ನಮ್ಮ 'ವಿಕಸಿತ ಭಾರತ'ದ ಗುರಿಯತ್ತಿನ ಪಯಣವನ್ನು ಮುನ್ನಡೆಸಲಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟರು.




