ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಭಾರತದ ಚುನಾವಣಾ ಆಯೋಗದಲ್ಲಿ ಮುಖ್ಯಸ್ಥರು ಹಾಗೂ ಆಯುಕ್ತರ ನಡುವೆ ಆಂತರಿಕ ಭಿನ್ನಾಭಿಪ್ರಾಯ ತೀವ್ರಗೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಏಕಪಕ್ಷೀಯ ನಿರ್ಧಾರಗಳು ಮತ್ತು ಕಾರ್ಯವೈಖರಿಯನ್ನು ವಿರೋಧಿಸಿ ಉಳಿದಿಬ್ಬರು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮತದಾರರ ಪಟ್ಟಿಯಲ್ಲಿ ಅಕ್ರಮದ ಆರೋಪ: ದೇಶಾದ್ಯಂತ ಜಾರಿಯಲ್ಲಿರುವ 'ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ' ಪ್ರಕ್ರಿಯೆಯಲ್ಲಿ ತಮ್ಮ ಗಮನಕ್ಕೆ ತರದೆ ಹಾಗೂ ನಿಯಮಗಳನ್ನು ಉಲ್ಲಂಘಿಸಿ ಲಕ್ಷಾಂತರ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಮತ್ತು ಹೊಸದಾಗಿ ಸೇರಿಸಲಾಗಿದೆ ಎಂದು ಇಬ್ಬರೂ ಆಯುಕ್ತರು ಲಿಖಿತ ದೂರು ನೀಡಿದ್ದಾರೆ.
14 ಬಾರಿ ಲಿಖಿತ ಆಕ್ಷೇಪಣೆ: ಕಳೆದ 10 ತಿಂಗಳಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ತೆಗೆದುಕೊಂಡ ನಿರ್ಧಾರಗಳ ವಿರುದ್ಧ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಬರೋಬ್ಬರಿ 14 ಬಾರಿ ತಮ್ಮ ಲಿಖಿತ ಅಸಮ್ಮತಿಯನ್ನು ದಾಖಲಿಸಿದ್ದಾರೆ.
ಐಟಿ ವ್ಯವಸ್ಥೆಯ ಕೇಂದ್ರೀಕರಣ: ದೆಹಲಿಯಿಂದಲೇ ಮತದಾರರ ದತ್ತಾಂಶ ವ್ಯವಸ್ಥೆಯನ್ನು ಕೇಂದ್ರೀಕೃತವಾಗಿ ನಿಯಂತ್ರಿಸುತ್ತಿರುವುದಕ್ಕೆ ಹಾಗೂ ಸ್ಥಳೀಯ ಚುನಾವಣಾ ನೋಂದಣಿ ಅಧಿಕಾರಿಗಳ ಅಧಿಕಾರವನ್ನು ಕಡಿತಗೊಳಿಸಿರುವುದಕ್ಕೆ ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಕುರಿತು ಕ್ಯಾಬಿನೆಟ್ ಕಾರ್ಯದರ್ಶಿಗೂ ಪತ್ರ ಬರೆದಿದ್ದಾರೆ.
ಪಶ್ಚಿಮ ಬಂಗಾಳದ ಪ್ರಕರಣ: ಪಶ್ಚಿಮ ಬಂಗಾಳದಲ್ಲಿ ಮತದಾರರ ಹೆಸರು ಕೈಬಿಟ್ಟಿರುವ ವಿಚಾರವಾಗಿ ನ್ಯಾಯಾಧಿಕರಣಕ್ಕೆ ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆಯನ್ನು ತಮ್ಮ ಗಮನಕ್ಕೆ ತರದೆ ನಡೆಸಲಾಗಿದೆ ಎಂದು ಆಯುಕ್ತರು ಪ್ರಶ್ನಿಸಿದ್ದಾರೆ.
'ಆಯೋಗದಲ್ಲಿ ಎಲ್ಲವೂ ಸರಿ ಇದೆ' - ಇಸಿಐ ಸ್ಪಷ್ಟನೆ:
ಈ ವರದಿಗಳನ್ನು ಚುನಾವಣಾ ಆಯೋಗದ ಉನ್ನತ ಮೂಲಗಳು ತಳ್ಳಿಹಾಕಿವೆ. ದೇಶಾದ್ಯಂತ ನಡೆದ ಎಸ್‌ಐಆರ್ ಪ್ರಕ್ರಿಯೆ ಸೇರಿದಂತೆ ಆಯೋಗ ತೆಗೆದುಕೊಂಡ ಎಲ್ಲಾ ನಿರ್ಧಾರಗಳು ಸಂಪೂರ್ಣವಾಗಿ ಸರ್ವಾನುಮತದಿಂದ ಕೂಡಿವೆ ಹಾಗೂ ಮೂವರೂ ಆಯುಕ್ತರ ಪೂರ್ಣ ಅನುಮೋದನೆ ಪಡೆದೇ ಜಾರಿಯಾಗಿವೆ ಎಂದು ಸ್ಪಷ್ಟಪಡಿಸಿವೆ.
ಬೀದಿಗಿಳಿದ ವಿಪಕ್ಷಗಳು: 'ಸುಪ್ರೀಂ ಕೋರ್ಟ್ ತಾನಾಗಿಯೇ ದೂರು ದಾಖಲಿಸಲಿ'ಚುನಾವಣಾ ಆಯೋಗದ ಆಂತರಿಕ ಕಲಹ ಮುನ್ನೆಲೆಗೆ ಬರುತ್ತಿದ್ದಂತೆಯೇ ವಿಪಕ್ಷಗಳು ಕೇಂದ್ರ ಸರ್ಕಾರ ಮತ್ತು ಸಿಇಸಿ ವಿರುದ್ಧ ಹಾಯ್ಕಿಂತಿವೆ. ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಕಾಂಗ್ರೆಸ್‌ನ ಮನೀಶ್ ತಿವಾರಿ ಹಾಗೂ ಜೈರಾಮ್ ರಮೇಶ್, ಆಮ್ ಆದ್ಮಿ ಪಕ್ಷದ ಸೌರಭ್ ಭಾರದ್ವಾಜ್ ಮತ್ತು ಶಿವಸೇನೆಯ (ಯುಬಿಟಿ) ಸಂಜಯ್ ರಾವತ್ ಆಯೋಗದ ನಿಷ್ಪಕ್ಷಪಾತತನವನ್ನು ಬಹಿರಂಗವಾಗಿ ಪ್ರಶ್ನಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯತೆಯನ್ನು ಕಾಯಲು ಸುಪ್ರೀಂ ಕೋರ್ಟ್ ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.




