ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಕೆ.ಆರ್. ವೃತ್ತದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬಿಜೆಪಿ ನಾಯಕರ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. ವಂದೇ ಮಾತರಂ ವಿಚಾರ, ಬರ ಪರಿಸ್ಥಿತಿ ಹಾಗೂ ರಾಜಕೀಯ ಬೆಳವಣಿಗೆಗಳ ಕುರಿತು ಅವರು ಹಂಚಿಕೊಂಡ ಪ್ರಮುಖ ವಿವರಗಳು ಇಲ್ಲಿವೆ.
ಬಿಜೆಪಿ ನಾಯಕರದ್ದು ಕೇವಲ ರಾಜಕೀಯ ಮನಸ್ಥಿತಿ: ಬಿಜೆಪಿಯವರ ಎದೆ ಸೀಳಿದರೆ ರಾಜ್ಯದ ಹಿತ ಕಾಯುವ ಯಾವ ಅಂಶವೂ ಇರುವುದಿಲ್ಲ. ಅವರದ್ದು ಸಂಪೂರ್ಣವಾಗಿ ರಾಜಕೀಯ ಮನಸ್ಥಿತಿಯಾಗಿದ್ದು, ಅವರನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ಸಿಎಂ ವಾಗ್ದಾಳಿ ನಡೆಸಿದರು.
ವಂದೇ ಮಾತರಂ ಹೋರಾಟ ಹಾಗೂ ಪೊಲೀಸ್ ಅಧಿಕರಿ ಸಮರ್ಥನೆ: ವಂದೇ ಮಾತರಂ ವಿಚಾರವಾಗಿ ಬಿಜೆಪಿ ಹೋರಾಟಕ್ಕೆ ಕರೆ ನೀಡಿರುವುದಕ್ಕೆ ತಿರುಗೇಟು ನೀಡಿದ ಅವರು, ಎಲ್ಲದರಲ್ಲೂ ತಪ್ಪು ಕಂಡುಹಿಡಿಯುವುದು ವಿಪಕ್ಷದವರ ಪ್ರವೃತ್ತಿಯಾಗಿದೆ. ಅಹಿತಕರ ಘಟನೆಗಳು ನಡೆಯಬಾರದು ಎಂದು ಎಚ್ಚರಿಕೆ ನೀಡಿದ ಪೊಲೀಸ್ ಅಧಿಕಾರಿಯ ಮಾತನ್ನು ತಿರುಚಿ, ಮಹಾರಾಜರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ವಿರೋಧ ಪಕ್ಷದ ನಾಯಕನ ಸ್ಥಾನ ಅತ್ಯಂತ ಸಾಂವಿಧಾನಿಕ ಹುದ್ದೆಯಾಗಿದ್ದು, ಅವರಿಂದ ಇನ್ನು ಉನ್ನತ ಮಟ್ಟದ ನಡವಳಿಕೆಯನ್ನು ನಿರೀಕ್ಷಿಸುತ್ತೇನೆ ಎಂದರು.
ಪ್ರಚೋದನಾಕಾರಿ ರಾಜಕಾರಣಕ್ಕೆ ಆಕ್ಷೇಪ: ಪ್ರಹ್ಲಾದ್ ಜೋಶಿ ಸೇರಿದಂತೆ ಹಲವರು ಒಂದೇ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ. ಸಮಾಜದಲ್ಲಿ ಕಾನೂನು ಪಾಲನೆ ಮಾಡಬೇಕಾದವರು ಜನರನ್ನ ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದ ಮೂಲಕ ಭಾರತಕ್ಕೆ ಗೌರವ ಸಿಗುತ್ತಿದ್ದು, ಇಲ್ಲಿ ಅಶಾಂತಿ ಸೃಷ್ಟಿಸಿದರೆ ದೇಶಕ್ಕೆ ತೊಂದರೆಯಾಗುತ್ತದೆ. ಪ್ರಧಾನಿ ಮಂತ್ರಿಗಳ ಕನಸಿಗೆ ಇಲ್ಲಿನ ಬಿಜೆಪಿ ನಾಯಕರು ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿದರು.
ಬರ ವಿಚಾರದಲ್ಲಿ ರಾಜಕೀಯ ಬೇಡ: ಮಳೆ ಕ್ಷೀಣಿಸುತ್ತಿರುವ ಕುರಿತು ಮಾತನಾಡಿ, ಶಾಸಕರು ಆತಂಕಪಡುವ ಅಗತ್ಯವಿಲ್ಲ. ಬರ ಪರಿಸ್ಥಿತಿಯನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ. ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ವರದಿ ನಿಖರವಾಗಿರಬೇಕು. ವಿದ್ಯುತ್ ಸಮಸ್ಯೆ ಹೆಚ್ಚಾಗುತ್ತಿದ್ದು, ಜನರನ್ನು ಮಾನಸಿಕವಾಗಿ ಸಿದ್ಧಪಡಿಸಿ ಕುಡಿಯುವ ನೀರು ಪೂರೈಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ವಿಶೇಷ ಅಧಿವೇಶನ ಕರೆಯಲಾಗಿದ್ದು, ರೈತರೊಂದಿಗೆ ಚರ್ಚಿಸಿ ಹೆಚ್ಚಿನ ಘೋಷಣೆಗಳನ್ನು ಮಾಡಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದರು.




