ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೈರಮಂಗಲ ಹಾಗೂ ಬಿಡದಿ ವ್ಯಾಪ್ತಿಯಲ್ಲಿ ಗ್ರೇಟರ್ ಬೆಂಗಳೂರು ಟೌನ್ಶಿಪ್ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ಕಳೆದ ಐದು ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತರ ಹೋರಾಟದ ಸ್ಥಳಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿದರು.
ಈ ವೇಳೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ದೂರವಾಣಿ ಮೂಲಕ ಸತ್ಯಾಗ್ರಹ ನಿರತ ರೈತರೊಂದಿಗೆ ನೇರವಾಗಿ ಮಾತನಾಡಿ, ಅಭಯ ನೀಡಿದರು.ಈ ಭೇಟಿಯ ವೇಳೆ ನಿಖಿಲ್ ಕುಮಾರಸ್ವಾಮಿ ಅವರು ವ್ಯಕ್ತಪಡಿಸಿದ ಪ್ರಮುಖ ವಿಚಾರಗಳು ಹಾಗೂ ನಡೆದ ಭಾವುಕ ಕ್ಷಣಗಳ ವಿವರ ಹೀಗಿದೆ.
೧. 136 ಸೀಟುಗಳ ಬಹುಮತವಿದ್ದರೂ ಸಾಲಮನ್ನಾಗೆ ನಾಟಕವೇಕೆ?
"136 ಸೀಟುಗಳ ಭಾರಿ ಬಹುಮತವಿದ್ದರೂ ರೈತರ ಸಾಲಮನ್ನಾ ಮಾಡಲು ಕೇಂದ್ರದ ಮುಂದೆ ಭಿಕ್ಷೆ ಬೇಡುವ ನಾಟಕವನ್ನು ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲೇ ₹26,000 ಕೋಟಿ ಸಾಲಮನ್ನಾ ಮಾಡಿದ ಹೆಚ್.ಡಿ. ಕುಮಾರಸ್ವಾಮಿ ಅವರಲ್ಲಿದ್ದ ಇಚ್ಛಾಶಕ್ತಿ ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಏಕಿಲ್ಲ?" ಎಂದು ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು.
ರೈತರ ಬದುಕಿನ ಬಗ್ಗೆ ಯೋಚಿಸುವ ಬದಲು '60-40, 35-65' ಎಂದು ರಿಯಲ್ ಎಸ್ಟೇಟ್ ಕಂಪನಿಯ ಸಿಇಓ ರೀತಿ ಲೆಕ್ಕ ಹಾಕುತ್ತಿರುವುದು ದುರಂತ. ಬರೀ ₹2,500 ಕೊಟ್ಟು ಕೈತೊಳೆದುಕೊಳ್ಳುವ ಕಣ್ಣೊರೆಸುವ ತಂತ್ರಕ್ಕೆ ರಾಜ್ಯದ ಅನ್ನದಾತರು ಮರುಳಾಗುವುದಿಲ್ಲ ಎಂದು ಕಿಡಿಕಾರಿದರು.
೨. ರೈತರ ಪರವಾಗಿ ವಿಧಾನಸೌಧದ ಮುಂದೆ ಧರಣಿಗೂ ಸಿದ್ಧ: ಮಾಜಿ ಪ್ರಧಾನಿ ದೇವೇಗೌಡರ ಅಭಯ
ಹೋರಾಟದ ಸ್ಥಳದಿಂದಲೇ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಫೋನ್ ಮೂಲಕ ಸತ್ಯಾಗ್ರಹ ನಿರತ ರೈತರು ಮತ್ತು ತಾಯಂದಿರೊಂದಿಗೆ ನೇರವಾಗಿ ಮಾತನಾಡಿದರು. "ನಿಮ್ಮ ಪರವಾಗಿ ವಿಧಾನಸೌಧದ ಮುಂದೆ ಧರಣಿ ಕೂರಲೂ ಸಿದ್ಧ, ನಿಮಗಾಗಿ ಜೀವ ಕೊಡಲೂ ತಯಾರು! ಯಾವುದೇ ಕಾರಣಕ್ಕೂ ನಿಮ್ಮನ್ನು ಕೈಬಿಡುವುದಿಲ್ಲ, ಫಲವತ್ತಾದ ಭೂಮಿಯನ್ನು ಕಿತ್ತುಕೊಳ್ಳಲು ಬಿಡುವುದಿಲ್ಲ" ಎಂದು ಮಣ್ಣಿನ ಮಗ ದೇವೇಗೌಡರು ಅಭಯ ನೀಡಿದಾಗ ಸ್ಥಳದಲ್ಲಿದ್ದ ರೈತರು ಭಾವುಕರಾದರು.
೩. ಭೂಸ್ವಾಧೀನದ ವಿರುದ್ಧ ತೀವ್ರ ಹೋರಾಟದ ಎಚ್ಚರಿಕೆ
ಟೌನ್ಶಿಪ್ಹೆಸರಿನಲ್ಲಿ ಸರ್ಕಾರಿ ಬಲಪ್ರಯೋಗ ಮಾಡಿ ರೈತರ ಭೂಮಿ ಕಬಳಿಸಲು ಹೊರಟಿರುವ ಸರ್ಕಾರದ ನಡೆಯನ್ನು ಜೆಡಿಎಸ್ ಉಗ್ರವಾಗಿ ಖಂಡಿಸುತ್ತದೆ. ರೈತರ ಜೀವನೋಪಾಯಕ್ಕೆ ಮಾರಕವಾಗಿರುವ ಈ ಯೋಜನೆಯ ಭೂಸ್ವಾಧೀನವನ್ನು ಸಂಪೂರ್ಣವಾಗಿ ಕೈಬಿಡುವವರೆಗೆ ರೈತರೊಂದಿಗೆ ನಿಂತು ಹೋರಾಟ ಮುಂದುವರಿಸುವುದಾಗಿ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.




