ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಸೆಮಿಕಂಡಕ್ಟರ್ ವಿನ್ಯಾಸ ಮತ್ತು ಆರ್& ಡಿ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು 'ಆಕ್ಸಿರೋ ಸೆಮಿಕಂಡಕ್ಟರ್' ಸಂಸ್ಥೆಯ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.ಬೆಂಗಳೂರನ್ನೇ ತಮ್ಮ ಮುಖ್ಯ ಕೇಂದ್ರವಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಆಕ್ಸಿರೋ ಸಂಸ್ಥೆಯು ಸ್ಯಾಟಲೈಟ್ ಕಮ್ಯುನಿಕೇಶನ್, ಕನೆಕ್ಟಿವಿಟಿ, ಎಡ್ಜ್ ಎಐ ಹಾಗೂ ಕೈಗಾರಿಕಾ ತಂತ್ರಜ್ಞಾನ ವಲಯಗಳಲ್ಲಿ ತನ್ನ ತಾಂತ್ರಿಕ ಪೋರ್ಟ್‌ಫೋಲಿಯೊ ವಿಸ್ತರಿಸುತ್ತಿರುವ ಕುರಿತು ಪ್ರಸ್ತಾಪಿಸಿತು.
ಉದ್ಯಮ ವಿಸ್ತರಣೆಗೆ ಆಹ್ವಾನ: ಕರ್ನಾಟಕದಲ್ಲಿರುವ ಬಲಿಷ್ಠ ಸೆಮಿಕಂಡಕ್ಟರ್ ವಿನ್ಯಾಸ ವ್ಯವಸ್ಥೆ, ಜಾಗತಿಕ ಮಟ್ಟದ ಎಂಜಿನಿಯರಿಂಗ್ ಪ್ರತಿಭೆಗಳು ಹಾಗೂ ಟೆಲಿಕಾಂ, ಏರೋಸ್ಪೇಸ್ ಮತ್ತು ಡಿಫೆನ್ಸ್ ಕ್ಷೇತ್ರಗಳ ಜಾಲವನ್ನು ಬಳಸಿಕೊಂಡು ರಾಜ್ಯದಲ್ಲಿ ಕಾರ್ಯಚಟುವಟಿಕೆಗಳನ್ನು ವಿಸ್ತರಿಸುವಂತೆ ಸಚಿವರು ಮನವಿ ಮಾಡಿದರು.
ಸರ್ಕಾರದ ಪೂರ್ಣ ಬೆಂಬಲ: ಮುಂಬರುವ ದಿನಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ, ಉತ್ಪನ್ನ ತಯಾರಿಕೆ ಹಾಗೂ ಉನ್ನತ ಮಟ್ಟದ ಎಂಜಿನಿಯರಿಂಗ್ ವಿನ್ಯಾಸಗಳನ್ನು ರಾಜ್ಯದಲ್ಲಿ ಮತ್ತಷ್ಟು ಉತ್ತೇಜಿಸಲು ಸರ್ಕಾರದಿಂದ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಎಂ.ಬಿ. ಪಾಟೀಲ್ ಭರವಸೆ ನೀಡಿದರು.




