ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಟಿ. ರಘುಮೂರ್ತಿ ಅವರು ಶನಿವಾರ ನಗರದಲ್ಲಿ ಅತ್ಯಂತ ಸಂಭ್ರಮದಿಂದ ನಡೆದ 'ಹಿಂದೂ ಮಹಾಗಣಪತಿ ಶೋಭಾಯಾತ್ರೆ'ಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ವಿಶೇಷ ಪೂಜೆ ಸಲ್ಲಿಸುವ ಮೂಲಕ ಗಮನ ಸೆಳೆದರು.
ಮಡಕರಿ ಸರ್ಕಲ್‌ನಿಂದ ಅದ್ದೂರಿ ಮೆರವಣಿಗೆ: ಮಧ್ಯಾಹ್ನ 2:45ರ ಸುಮಾರಿಗೆ ಮಡಕರಿ ಸರ್ಕಲ್ ಬಳಿಗೆ ಆಗಮಿಸಿದ ಸಚಿವ ಟಿ. ರಘುಮೂರ್ತಿ ಅವರನ್ನು ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ, ಮಾಜಿ ನಗರಸಭೆ ಅಧ್ಯಕ್ಷ ಬಿ.ಕಾಂತರಾಜು, ಮಾಜಿ ಜಿ.ಪಂ ಅಧ್ಯಕ್ಷ ರವಿಕುಮಾರ್, ಟಿವಿಎಸ್ ಶೋ ರೂಂ ಮಾಲೀಕ ಅರುಣ್ ಕುಮಾರ್ ಹಾಗೂ ಇತರ ಗಣ್ಯರು ಆತ್ಮೀಯವಾಗಿ ಸ್ವಾಗತಿಸಿದರು. ನಂತರ ಎಲ್ಲರೂ ಸೇರಿ ಗಣಪತಿಗೆ ವಿಶೇಷ ಪೂಜೆ ನೆರವೇರಿಸಿದರು.
ಪೂಜೆಯ ಬಳಿಕ ಸಚಿವರು ಜನತೆಗೆ ಕೈ ಮಾಡುತ್ತಾ, ಅಂಬೇಡ್ಕರ್ ಸರ್ಕಲ್, ಪ್ರವಾಸಿ ಮಂದಿರ, ಎಸ್.ಬಿ.ಐ ಸರ್ಕಲ್ ಹಾಗೂ ಗಾಂಧಿ ಸರ್ಕಲ್ ವರೆಗೆ ಸಾಗಿದ ಬೃಹತ್ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಸಚಿವರೊಂದಿಗೆ ಸೆಲ್ಫಿ ಹಾಗೂ ಅಭಿಮಾನಿಗಳ ಸಂಭ್ರಮ: ಮೆರವಣಿಗೆಯುದ್ಧಕ್ಕೂ ಸಚಿವರನ್ನು ಕಣ್ಣುಂಬಿಕೊಳ್ಳಲು ಅಭಿಮಾನಿಗಳು, ಮಹಿಳೆಯರು ಹಾಗೂ ಮಕ್ಕಳು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಸಚಿವ ಟಿ. ರಘುಮೂರ್ತಿ ಅವರಿಗೆ ಕೈಬೀಸಿ 'ಸಾರ್.. ಸಾರ್..' ಎಂದು ಅಭಿನಂದನೆ ಸಲ್ಲಿಸಿದ್ದರು. ಅಲ್ಲದೆ, ಯುವಕರು ಸಚಿವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದ ದೃಶ್ಯಗಳು ಮೆರವಣಿಗೆಯ ಹಾದಿಯುದ್ದಕ್ಕೂ ಕಂಡುಬಂದವು.
ಅಚ್ಚುಕಟ್ಟಾಗಿ ಸಾಗಿದ ಶೋಭಾಯಾತ್ರೆ - ಸಚಿವ ರಘುಮೂರ್ತಿ ಮೆಚ್ಚುಗೆ:
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಟಿ.ರಘುಮೂರ್ತಿ ಅವರು, "ಹಿಂದೂ ಮಹಾಗಣಪತಿ ಮೆರವಣಿಗೆಯ ಪ್ರತಿಯೊಂದು ಸಿದ್ಧತೆ ಮತ್ತು ಮಾಹಿತಿಯನ್ನು ಮುಂಚಿತವಾಗಿಯೇ ಪಡೆದುಕೊಳ್ಳಲಾಗಿದ್ದು, ಕಾರ್ಯಕ್ರಮವು ಅತ್ಯಂತ ಅಚ್ಚುಕಟ್ಟಾಗಿ ನಡೆಯುತ್ತಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ಅಥವಾ ತೊಂದರೆಗಳಾಗದಂತೆ ಶೋಭಾಯಾತ್ರೆ ಶಾಂತಿಯುತವಾಗಿ ಸಾಗಬೇಕು ಎಂದು ಮೊದಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು" ಎಂದರು.

ಮುಂದುವರೆದು ಮಾತನಾಡುತ್ತಾ, "ಸಾಮಾನ್ಯ ಜನರು ಗಣಪತಿಯನ್ನು ಕಣ್ತುಂಬಿಕೊಂಡು ಸಂಭ್ರಮಿಸುತ್ತಿರುವುದಲ್ಲದೆ, ಯುವಕರು, ಮಕ್ಕಳು, ಯುವತಿಯರು ಹಾಗೂ ಮಹಿಳೆಯರು ಅತ್ಯಂತ ಉತ್ಸಾಹದಿಂದ ಕುಣಿದು ಕುಪ್ಪಳಿಸುತ್ತಿದ್ದಾರೆ. ನಮ್ಮ ಸರ್ಕಾರದಿಂದ ಅಗತ್ಯವಿರುವ ಎಲ್ಲ ರೀತಿಯ ಸಂಪೂರ್ಣ ಸಹಕಾರವನ್ನು ನೀಡಲಾಗಿದ್ದು, ಇಡೀ ಶೋಭಾಯಾತ್ರೆಯು ಯಾವುದೇ ವಿಘ್ನವಿಲ್ಲದೆ ಅತ್ಯಂತ ಯಶಸ್ವಿಯಾಗಿ ಮತ್ತು ಅಚ್ಚುಕಟ್ಟಾಗಿ ಜರುಗುತ್ತಿದೆ" ಎಂದು ಹರ್ಷ ವ್ಯಕ್ತಪಡಿಸಿದರು.




