ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ತಾನು ಪಿಎಚ್‌ಡಿ (PhD) ಪದವೀಧರ, ಡಾಕ್ಟರ್ ಎಂದು ಸುಳ್ಳು ಪ್ರೊಫೈಲ್ ಸೃಷ್ಟಿಸಿ, ಮದುವೆಯಾಗುವ ಆಸೆ ತೋರಿಸಿ ಬೆಂಗಳೂರು ಹಾಗೂ ಮೈಸೂರಿನ ಹತ್ತಕ್ಕೂ ಹೆಚ್ಚು ಯುವತಿಯರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಈ ಹೈಟೆಕ್ ವಂಚನೆ ಜಾಲದ ಮುಖ್ಯ ಸೂತ್ರಧಾರ ಪ್ರದೀಪ್ ಸೋಲೋಮನ್ ಹಾಗೂ ಆತನಿಗೆ ಸಾತ್ ನೀಡಿದ ತಾಯಿ ಕಲಾವತಿ ವಿರುದ್ಧ ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಬಂಧನ ಭೀತಿಯಿಂದ ಅಮ್ಮ-ಮಗ ಇಬ್ಬರೂ ನಾಪತ್ತೆಯಾಗಿದ್ದಾರೆ.
ಐಷಾರಾಮಿ ಬಂಗಲೆ ಬಾಡಿಗೆಗೆ ಪಡೆದು ಬಿಲ್ಡಪ್!
ಆರೋಪಿ ಪ್ರದೀಪ್ ಸೋಲೋಮನ್ ಮ್ಯಾಟ್ರಿಮೋನಿಯ ಸೈಟ್‌ಗಳಲ್ಲಿ ‘ಡಾ. ಪ್ರದೀಪ್ ಸೋಲೋಮನ್’ ಹೆಸರಿನಲ್ಲಿ ಅತ್ಯಂತ ಆಕರ್ಷಕ ಪ್ರೊಫೈಲ್ ತೆರೆದಿದ್ದನು. ಮಗನ ಈ ವಂಚನೆಗೆ ತಾಯಿ ಕಲಾವತಿ ಕೂಡ ಸಂಪೂರ್ಣವಾಗಿ ಸಾತ್ ನೀಡಿದ್ದಳು. ಇವರಿಬ್ಬರು ಮೈಸೂರಿನಲ್ಲಿ ದೊಡ್ಡದೊಂದು ಐಷಾರಾಮಿ ಬಂಗಲೆ ಬಾಡಿಗೆಗೆ ಪಡೆದು, ತಾವು ಕೋಟ್ಯಧಿಪತಿಗಳು ಎಂಬಂತೆ ಸಮಾಜದಲ್ಲಿ ಬಿಲ್ಡಪ್ ಕೊಡುತ್ತಿದ್ದರು. ಈ ಐಷಾರಾಮಿ ಮನೆ ಮತ್ತು ಅವರ ರಾಜಾತಿರಾಜ ಲೈಫ್‌ಸ್ಟೈಲ್ ನೋಡಿ ಮದುವೆ ಸಂಬಂಧ ಬೆಳೆಸಲು ಮುಂದೆ ಬರುವ ವಧುವಿನ ಕುಟುಂಬಸ್ಥರು ಇವರ ಬಣ್ಣದ ಮಾತುಗಳ ಬಲೆಗೆ ಸುಲಭವಾಗಿ ಬೀಳುತ್ತಿದ್ದರು.
ಬ್ಯಾಂಕ್ ಖಾತೆ ಬ್ಲಾಕ್ ನೆಪ: ಲಕ್ಷ ಲಕ್ಷ ಲೂಟಿ
ಯುವತಿಯರ ಕುಟುಂಬದ ನಂಬಿಕೆ ಗಳಿಸಿದ ನಂತರ ಆರೋಪಿ ಪ್ರದೀಪ್, "ನನ್ನ ದೊಡ್ಡ ಮೊತ್ತದ ಹಣ ತಾಂತ್ರಿಕ ಕಾರಣಗಳಿಂದ ಬ್ಯಾಂಕ್‌ನಲ್ಲಿ ಸ್ಟ್ರಕ್ ಆಗಿದೆ, ಇನ್ನು ಕೆಲವೇ ದಿನಗಳಲ್ಲಿ ಆರ್‌ಬಿಐನಿಂದ ಹಣ ಬಿಡುಗಡೆಯಾಗುತ್ತದೆ. ಸದ್ಯಕ್ಕೆ ಅರ್ಜೆಂಟ್ ಬಿಸಿನೆಸ್ ಇರುವುದರಿಂದ ಕೈಯಲ್ಲಿ ಹಣವಿಲ್ಲ" ಎಂದು ಹೇಳಿ ಲಕ್ಷ ಲಕ್ಷ ರೂಪಾಯಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದನು.
ವಂಚನೆ: ಪ್ರದೀಪನ ಮಾತು ನಂಬಿ ಇತ್ತೀಚೆಗೆ ಬೆಂಗಳೂರು ಮೂಲದ ಶ್ರೀಮಂತ ಕುಟುಂಬವೊಂದು ಲಕ್ಷಾಂತರ ರೂಪಾಯಿ ಹಣ ನೀಡಿ ವಂಚನೆಗೊಳಗಾಗಿದೆ. ಹಣ ಕೈ ಸೇರಿದ ಬೆನ್ನಲ್ಲೇ ಅಮ್ಮ-ಮಗ ಇಬ್ಬರೂ ಮನೆಯನ್ನು ಖಾಲಿ ಮಾಡಿ ನಾಪತ್ತೆಯಾಗಿದ್ದಾರೆ.
ಮೈಸೂರಿನ ಬಂಗಲೆ ಮುಂದೆ ವಂಚನೆಗೊಳಗಾದವರ ಕಣ್ಣೀರು!
ಪ್ರದೀಪ್ ಕೈಯಲ್ಲಿ ಮೋಸ ಹೋದ ಮೈಸೂರು ಮತ್ತು ಬೆಂಗಳೂರಿನ ಹಲವು ಯುವತಿಯರು ಹಾಗೂ ಅವರ ಕುಟುಂಬಸ್ಥರು ಈಗ ಮೈಸೂರಿನ ಆ ಬಾಡಿಗೆ ಬಂಗಲೆಯ ಮುಂದೆ ಜಮಾಯಿಸಿ ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ತಮಗಾದ ವಂಚನೆ ಹಾಗೂ ಮಾನಹಾನಿಯ ಬಗ್ಗೆ ಕಣ್ಣೀರು ಹಾಕುತ್ತಿದ್ದಾರೆ.
ವಂಚಕ ಜೋಡಿ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚನೆ:
ಇತ್ತ ಆಡುಗೋಡಿ ಪೊಲೀಸರು ಕಳೆದ ಎರಡು ದಿನಗಳಿಂದ ವಂಚಕ ಅಮ್ಮ-ಮಗನಿಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಈ ಖತರ್ನಾಕ್ ಜೋಡಿಯ ಪತ್ತೆಗಾಗಿ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ತಿಳಿಸಿದ್ದಾರೆ.
ಮನವಿ: ಸಾರ್ವಜನಿಕರು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ಸಂಬಂಧಗಳನ್ನು ಹುಡುಕುವಾಗ ವರನ ಹಿನ್ನೆಲೆ, ಉದ್ಯೋಗ ಮತ್ತು ಆಸ್ತಿ ವಿವರಗಳನ್ನು ಖುದ್ದಾಗಿ ಪರಿಶೀಲಿಸದೆ ಯಾವುದೇ ರೀತಿಯ ಹಣಕಾಸಿನ ವ್ಯವಹಾರ ಮಾಡಬಾರದು ಎಂದು ಪೊಲೀಸರು ಎಚ್ಚರಿಸಿದ್ದಾರೆ.



