ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಕೀಯ ಒತ್ತಡಕ್ಕೆ ಮಣಿಯದೆ ರಾಜ್ಯ ಪೊಲೀಸ್ ಇಲಾಖೆ ಚುನಾವಣಾ ಕಾಯ್ದೆ ಹಾಗೂ ಆಯೋಗದ ನಿಯಮಗಳಂತೆ ಕಟ್ಟುನಿಟ್ಟಾಗಿ ವ್ಯವಹರಿಸಬೇಕು ಎಂದು ಆಗ್ರಹಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಪಕ್ಷದ ಹಿರಿಯ ನಾಯಕರ ನಿಯೋಗವು ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಚುನಾವಣಾ ಆಯೋಗ ನೀಡಿರುವ ಕಾನೂನುಬದ್ಧ ಹಕ್ಕಿನಂತೆ ಮತದಾರರ ಪಟ್ಟಿ ಶುದ್ಧೀಕರಣಕ್ಕಾಗಿ 'ನಮೂನೆ-7' ಅರ್ಜಿ ಸಲ್ಲಿಸುತ್ತಿರುವ ಬಿಜೆಪಿ ಕಾರ್ಯಕರ್ತರು ಹಾಗೂ ಬಿಎಲ್ಎ ಗಳ ವಿರುದ್ಧ ಕಾಂಗ್ರೆಸ್ ಸರ್ಕಾರ ರಾಜಕೀಯ ಒತ್ತಡ ಹೇರಿ ಸುಳ್ಳು ಎಫ್ಐಆರ್ ಮಾಡುತ್ತಿದೆ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.
ಕಳ್ಳ ಮತದಾರರನ್ನು ರಕ್ಷಿಸಲು ಕಾಂಗ್ರೆಸ್ ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಆಕ್ಷೇಪಣೆ ಎತ್ತಿದ ಬಿಜೆಪಿ ಕಾರ್ಯಕರ್ತರ ಮೇಲೆಯೇ ಕ್ರಿಮಿನಲ್ ಪ್ರಕರಣಗಳನ್ನು ಜಡಿಯುವ ಕುತಂತ್ರ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಸುಳ್ಳು ಪ್ರಕರಣಗಳ ಮೂಲಕ ಬೆದರಿಸುವ ಕಾಂಗ್ರೆಸ್ನ ಈ ತಂತ್ರಗಳಿಗೆ ಅಂಜುವ ಪ್ರಶ್ನೆಯೇ ಇಲ್ಲ. ವಾಸ್ತವ ಮತದಾರರ ಪಟ್ಟಿಗಾಗಿ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಬಿಜೆಪಿ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ, ಪಕ್ಷದ ಸಂಸದರು, ಶಾಸಕರು ಹಾಗೂ ಪ್ರಮುಖ ನಾಯಕರು ಉಪಸ್ಥಿತರಿದ್ದರು.




