ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸಾಸಲು ಹೋಬಳಿ ಎತ್ತಿನ ಹೊಳೆ ಕಾಮಗಾರಿ ಪರಿಶೀಲನೆಗೆಂದು ದೊಡ್ಡಬಳ್ಳಾಪುರ ತಾಲ್ಲೂಕಿಗೆ ಆಗಮಿಸಿದ್ದ ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿರವರು ರೈತರನ್ನು ಸಂಪರ್ಕಿಸಿದೆ ತೆರಳಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಸಾಸಲು ಹೋಬಳಿ ಲಕ್ಕೇನಹಳ್ಳಿ ಸಮೀಪ ನೀರು ಸಂಗ್ರಹಕ್ಕೆ ಸಮತೋಲನ ಜಲಾಶಯ ನಿರ್ಮಾಣಕ್ಕೆ ಗುರುತಿಸಲಾಗಿರುವ ಸ್ಥಳದಲ್ಲಿ ವಿಶ್ವೇಶ್ವರಯ್ಯ ಜಲ ನಿಗಮದಿಂದ ಪೆಂಡಾಲ್ ಹಾಗೂ ಖುರ್ಚಿ ಹಾಕಿ ವೇದಿಕೆ ನಿರ್ಮಿಸಲಾಗಿತ್ತು. ಸಚಿವರಿಗಾಗಿ ಅಧಿಕಾರಿಗಳು ಸಹ ಕಾದು ನಿಂತಿದ್ದರು. ಆದರೆ ಸಚಿವರು ಮಾತ್ರ ಇತ್ತ ಸುಳಿಯಲಿಲ್ಲ. ಲಕ್ಕೇನಹಳ್ಳಿಯಲ್ಲಿ ಜಲಾಶಯ ನಿರ್ಮಿಸುವುದರಿಂದ ಮೂರು ಗ್ರಾಮಗಳು ಮುಳುಗಡೆಯಾಗಲಿವೆ.
ಸುಮಾರು 2,500 ಎಕರೆ ಫಲವತ್ತಾದ ಕೃಷಿ ಭೂಮಿ ಸ್ವಾಧೀನ ವಿರೋಧಿಸಿ ರೈತರು ಹೋರಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಸಚಿವರಿಗೆ ಲಿಖಿತವಾಗಿ ಮನವಿ ಸಲ್ಲಿಸಲು ರೈತರು ಅಧಿಕಾರಿಗಳು ಕಾಯುತ್ತ ಕುಳಿತ್ತಿದ್ದರೂ ರೈತರ ಪ್ರಶ್ನೆಗಳಿಗೆ ತಪ್ಪಿಸಿಕೊಳ್ಳಲು ಪೆಂಡಾಲ್ ನಿಂದ ಕಿಲೋ ಮೀಟರ್ ದೂರದಲ್ಲಿ ಎತ್ತಿನ ಹೊಳೆ ಪಂಪ್ ಹೌಸ್ ಬಳಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಕಾಮಗಾರಿ ಬಗ್ಗೆ ಮಾಹಿತಿ ಪಡೆದು ರೈತರನ್ನು ಸಂಪರ್ಕಿಸಿದೆ ಹಾಗೆಯೆ ನಿರ್ಗಮಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ದೀರಜ್ ಮುನಿರಾಜು ಸಚಿವರಿಗೆ ಮಾಹಿತಿ ನೀಡಿ,ಎತ್ತಿನಹೊಳೆಯಿಂದ ನೀರು ಹರಿದು ಬರುವ ಪೈಪ್ಲೈನ್ ಹಾದು ಹೋಗಿರುವ ಮಾರ್ಗದಲ್ಲಿ ರಸ್ತೆಗಳು ಹಾಳಾಗಿದ್ದು ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆ ಸಂಚಾರ ತುಂಬಾ ತೊಂದರೆಯಾಗಿದೆ. ತುರ್ತಾಗಿ ರಸ್ತೆ ದುರಸ್ತಿ ಯಾಗಬೇಕು.
ಲಕ್ಕೇನಹಳ್ಳಿಯಲ್ಲಿ ಜಲಾಶಯ ನಿರ್ಮಿಸುವುದರಿಂದ ಮೂರು ಗ್ರಾಮಗಳು ಮುಳುಗಡೆ ಯಾಗಲಿದ್ದು ಇದರಿಂದ ಜನರ ಬದುಕು ಸಂಕಷ್ಠಕ್ಕೆ ಸಿಲುಕಿವೆ. ಅದ್ದರಿಂದ ಜಲಾಶಯ ನಿರ್ಮಾಣದಿಂದ ರೈತರಿಗೆ ತೊಂದರೆಯಾಗದಂತೆ ಪರ್ಯಾಯ ಮಾರ್ಗ ಕಂಡು ಕೊಳ್ಳುವಂತೆ ಸಚಿವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಟಿಎಪಿಎಂಸಿಎಸ್ ಅಧ್ಯಕ್ಷ ಡಿ.ಸಿದ್ದರಾಮಯ್ಯ, ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಎಂ.ಬೈರೇಗೌಡ ಹಾಗು ಉನ್ನತ ಅಧಿಕಾರಿಗಳು ಹಾಗೂ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.




