ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಪೆಪ್ಪರ್ ಸ್ಪ್ರೇ ಹೊಡೆದು ಪ್ರಜ್ಞೆ ತಪ್ಪಿಸಿ, ಅತ್ಯಾಚಾರ ಎಸಗಿರುವ ಭೀಕರ ಆರೋಪದಡಿ ವೈದ್ಯರೊಬ್ಬರ ವಿರುದ್ಧ ನಗರದ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಹಕಾರ ನಗರದ ಡಯಾಗ್ನಾಸ್ಟಿಕ್ ಸೆಂಟರ್ವೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಯುವರಾಜ್ ಮನೋಹರ್ ಎಂಬುವವರೇ ಆರೋಪ ಎದುರಿಸುತ್ತಿರುವ ವೈದ್ಯ. ೩೦ ವರ್ಷದ ಸಂತ್ರಸ್ತ ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಎಫ್ಐಆರ್ ಹೂಡಿದ್ದಾರೆ.
ಘಟನೆಯ ವಿವರ: ಸಂತ್ರಸ್ತ ಯುವತಿಯೂ ಅದೇ ಡಯಾಗ್ನಾಸ್ಟಿಕ್ ಸೆಂಟರ್ನಲ್ಲಿ ಉದ್ಯೋಗಿಯಾಗಿದ್ದರು. ಕಳೆದ ವರ್ಷದ ಡಿಸೆಂಬರ್ ೧೫ ರಂದು ಕಚೇರಿಯಲ್ಲಿದ್ದಾಗ, ಫೈಲ್ ಹುಡುಕುವ ನೆಪದಲ್ಲಿ ಆರೋಪಿ ವೈದ್ಯ ಆಕೆಯನ್ನು ಮೊದಲನೇ ಮಹಡಿಗೆ ಕರೆದೊಯ್ದಿದ್ದಾನೆ. ಬಳಿಕ ಆಕೆಯ ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದು ಅಸ್ವಸ್ಥಗೊಳಿಸಿ, ಪ್ರಜ್ಞೆ ತಪ್ಪಿದ್ದಾಗ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ, ಈ ಇಡೀ ಕೃತ್ಯವನ್ನು ತನ್ನ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಯುವತಿ ಎಚ್ಚರಗೊಂಡು ಪ್ರಶ್ನಿಸಿದಾಗ, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ತದನಂತರ ಅಮೃತನಗರದಲ್ಲಿ ಬಾಡಿಗೆ ಮನೆ ಮಾಡಿಕೊಟ್ಟು ಆಕೆಯ ಮೇಲೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಜಾತಿ ನಿಂದನೆ ಮತ್ತು ಬೆದರಿಕೆ: ಪ್ರಸಕ್ತ ವರ್ಷದ ಜುಲೈ ೨ ರಂದು ಸಂತ್ರಸ್ತೆಯ ಜಾತಿಯ ಬಗ್ಗೆ ತಿಳಿದುಕೊಂಡ ಆರೋಪಿ, ಅವ್ಯಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ, ಇನ್ಮುಂದೆ ಕೆಲಸಕ್ಕೆ ಬರಬಾರದೆಂದು ಜೀವ ಬೆದರಿಕೆ ಹಾಕಿ ಕಳುಹಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.
ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಕೊಡಿಗೆಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ವೈದ್ಯನ ಬಂಧನಕ್ಕೆ ತನಿಖೆ ಚುರುಕುಗೊಳಿಸಿದ್ದಾರೆ.




